Thursday, December 31, 2009

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

ಲೇ:ಅನು
ಸಂ:ಅಭಿ

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

“ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ…….” ಪ್ರೇಮದ ಅನುಭವ ಇಲ್ಲದವರಿಗೂ ಈ ಅದ್ಭುತ ಲೋಕದ ಪ್ರಯಾಣ ಮಾಡಿಸುವ ಹಾಡು; ಆ ಪ್ರೇಮ ಸಮುದ್ರದ ದರ್ಶನ ಮಾಡಿಸುವ ಆ ದನಿ ನೀಲಾಕಾಶ ಮೀರಿ ಅನುರಣಿಸುತ್ತಲೇ ಇರುತ್ತದೆ. “ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ……” ದೇವ ಮಂದಿರದಂತೆ ಪ್ರೀತಿಯಿಂದ ಪುನೀತವಾಗಿದೆ ಮನಸಿನೊಳಗೂ. ಎಷ್ಟು ಸಹಜ ದನಿಯಲ್ಲಿ ಹೇಳಿ ಬಿಡುತ್ತಾರೆ.


ದೂರದ ಊರಿನಲ್ಲೇ ಉಳಿದ ಪತಿಯ ನೆನಪಿನಲ್ಲಿ, ತವರ ಸಂಭ್ರಮದಲ್ಲಿ ಇದ್ದೂ ಇರಲಾರದ ತುಮುಲದ ಚಿತ್ರ “ಬಳೆಗಾರ ಚೆನ್ನಯ್ಯ” ನದು. ಮಾಂತ್ರಿಕ ಧ್ವನಿಯಲ್ಲಿ “ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು” ಎಂದು ಘಟ್ಟಿಸಿ ಕೇಳಿದಾಗ ಯಾವ ಪತಿರಾಯನಿಗೂ ಕೋಪ ಅಳಿದು ಹೋಗಬೇಕು.


ಏನೆಲ್ಲಾ ಕಷ್ಟ-ಕೋಟಲೆ ಇದ್ದರೂನೂ ಸೂರ್ಯ ಹುಟ್ಟಿ ಬರುವ ಭರವಸೆ ನಮಗಿತ್ತು. “ಕೋಡಗನ ಕೋಳಿ ನುಂಗಿತ್ತಾ….” “ತರವಲ್ಲ ತಗಿ ನಿನ್ನ ತಂಬೂರಿ…” “ಸೋರುತಿಹುದು ಮನೆಯ ಮಾಳಿಗೆ…” ಎನ್ನುತ್ತಾ ತತ್ವಗಳನ್ನು ಕೇಳಿಸುತ್ತಿದ್ದ ಅಮೋಘ ಧ್ವನಿ ನಿತ್ಯ ನೂತನ- ನಿತ್ಯ ನಿರಂತರ ಎಂದು ನೆಮ್ಮದಿಯಲ್ಲೇ ಇದ್ದು ಬಿಟ್ಟವಲ್ಲ? ಆ ಧ್ವನಿ ಮುಂದೊಮ್ಮೆ ನೀರವವಾಗಬಹುದೆಂಬ ಯೋಚನೆಯೂ ಇಲ್ಲದಂತೆ.


“ಬಾ ಇಲ್ಲಿ ಸಂಭವಿಸು!” ಎಂತಹ ಹಾಡು!! ಎಂತಹ ಬೇಡಿಕೆ….. ಸಿ. ಅಶ್ವತ್ಥ್ ಮತ್ತೆ ಮತ್ತೆ ಇಲ್ಲಿ ಆವಿರ್ಭಾವಿಸಬೇಕು. ತುಂಬು ಜೀವನ ನಡೆಸಿದ ಆ ಚೇತನದ ಸ್ವರ ಗಂಗೆ ನಮ್ಮ ಮನ-ಮನೆಗಳನ್ನು ಆರ್ದ್ರವಾಗಿಸಬೇಕು.


Saturday, December 19, 2009

ಚಿತ್ರ ವಿಮರ್ಶೆ: ಕಳ್ಳರ ಸಂತೆ

ಚಿತ್ರ ವಿಮರ್ಶೆ: ಕಳ್ಳರ ಸಂತೆ

ಈ ವಾರ ತೆರೆಕಂಡಿರುವ ಅಗ್ನಿಶ್ರೀಧರ್ ರವರ ’ ಕಳ್ಳರ ಸಂತೆ’ ಅದು ಹುಟ್ಟು ಹಾಕಿದ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಸಿ ಮಾಡಿವೆ. ಮೊದಲೆರಡು ಚಿತ್ರಗಳಲ್ಲಿದ್ದ ಮೊನಚು ಕಳೆದು ಹೋಗಿದೆ. ’ಆ ದಿನಗಳು’ ಮತ್ತು ’ಸ್ಲಂ ಬಾಲ’ ಚಿತ್ರಗಳು ನೈಜ ಘಟನೆಗಳ ಆಧಾರಿತ ಕೃತಿಗಳು. ಆದರೆ ’ ಕಳ್ಳರ ಸಂತೆ’ ಯಲ್ಲಿ ನೈಜತೆ ಮಾಯವಾಗಿ ಕಾಲ್ಪನಿಕ ಚಿತ್ರವಾಗಿ ಹಾಸ್ಯಾಸ್ಪದವಾಗಿದೆ.


   ಚಿತ್ರದ ಆರಂಭದ ದೃಶ್ಯದಲ್ಲಿ ನಮ್ಮ ನಾಯಕನನ್ನು ಪೋಲಿಸರು chase ಮಾಡುತ್ತಾರೆ. ಆತ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ಒಬ್ಬ ದಾರಿಹೋಕ ಟಿವಿ ಚಾನೆಲ್ ಒಂದಕ್ಕೆ ಸುದ್ದಿ ಕೊಡುತ್ತಾನೆ. ತದ ನಂತರ flashbackನಲ್ಲಿ ಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಮ್ಮ ನಾಯಕ ಕನ್ನಡ ಪದವೀಧರ. ಕೆಲಸ ಸಿಗೋದಿಲ್ಲ. ಸರ್ಕಾರಿ ನೌಕರಿಯಲ್ಲಿ “ಲಂಚಾವತಾರ” ದ ದರ್ಶನವಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು  ಕ್ಯಾರೆ ಅನ್ನುವುದಿಲ್ಲ .  ಆತ ಒಂದು ಸಣ್ಣ ಕ್ಯಾಂಟೀನ್ ಪ್ರಾರಂಭಿಸುತ್ತಾನೆ ಲೋಕಲ್ ಎಮ್ ಎಲ್ ಎ ಇಂದ ಕಿರುಕಳ ಅನುಭವಿಸುತ್ತಾನೆ.ಕ್ಯಾಂಟೀನ್ ಸುಟ್ಟುಹೋಗುತ್ತದೆ.ಕೊನೆಗೆ ಅವನು ಕಳ್ಳತನಕ್ಕೆ ಇಳಿಯುತ್ತಾನೆ.ಇವನಲ್ಲಿ ಸೂಕ್ಷ್ಮ ಸಂವೇದನೆಯನ್ನು ಹುಡುಕಿ ಆರೋಪಿಸಿದ್ದಾರೆ ನಿರ್ದೇಶಕರು.   ಇಂತಹ ಸೂಕ್ಷ್ಮ ಸಂವೇದನೆಯು ನಮ್ಮ ಘನ ಸರ್ಕಾರವನ್ನು ಉರುಳಿಸುವುದರಲ್ಲಿ ಸಫಲವಾಗುತ್ತದೆ?? 
      ಇಲ್ಲಿನ ಪ್ರಸಂಗಗಳು ಹಾಸ್ಯಾಸ್ಪದವಾಗಿದೆ. ಕೋಟ್ಯಾಂತರ ರೂಪಾಯಿಗಳ ಏರುಪೇರಿನಿಂದಲೇ ಸರ್ಕಾರ ಉರುಳಿಸಲು  ಸಾಧ್ಯವಿಲ್ಲ ಆದರೂ ನಮ್ಮ ಸೂಕ್ಷ್ಮ  ಸಂವೇದನೆಯ ನಾಯಕ  ಅದರಲ್ಲಿ ಯಶಸ್ವಿ! ! 
        ಇಲ್ಲಿ ಪ್ರಸ್ತುತ ವಿದ್ಯಮಾನಗಳನ್ನೆಲ್ಲ ಒಂದೇ ಕಡೆ ತೋರಿಸುವ ಪ್ರಯತ್ನವಾಗಿದೆ . ಅದರಲ್ಲಿ ಶ್ರೀಧರ್ ಎಡವಿದ್ದಾರೆ. ಕನ್ನಡ ಭಾಷಾಪ್ರೇಮ   ಅತಿಯಾಗಿದೆ.  ಕನ್ನಡ ಮಾತನಾಡುವುದರಿಂದ  ಅಸ್ತಮಾ ಕಾಯಿಲೆ ಗುಣವಾಗುತ್ತದೆ  ಎನ್ನುವ ಠರಾವಿನ ತನಕ.  ಹಾಗಿದ್ದರೆ ಕನ್ನಡಿಗರಿಗೆ ಯಾರಿಗೂ ಅಸ್ತಮಾ ಇರಲೇಬಾರದಿತ್ತಲ್ಲವೆ…..
          ಎಲ್ಲ ಬುದ್ದಿಜೀವಿಗಳ , ರಾಜಕಾರಣಿಗಳ ಗೋಸುಂಬೆ ಬಣ್ಣ ಬಯಲು ಮಾಡುತ್ತಾ  ಆವೇಶದಲ್ಲಿ ಹಾಸ್ಯಾಸ್ಪದ ದೃಶ್ಯ ಸಂಯೋಜನೆಯಿಂದ ಚಿತ್ರ ನೀಟಾಗಿ   ಎಡವುತ್ತದೆ.  ನಾಯಕ ಯಶ್ ,ನಾಯಕಿ ಹರಿಪ್ರಿಯಾ ಚೆನ್ನಾಗಿ ಅಭಿನಯಿಸಿದ್ದಾರೆ   ಮುಂದೆ ಭರವಸೆಯ ಕಲಾವಿದರಾಗುತ್ತಾರೆಂದು  ಸಂತೋಷ ಪಡೋಣ. ರಂಗಾಯಣ ರಘು ತಮ್ಮ ಎಂದಿನ ಶೈಲಿಯಲ್ಲಿ ಪಾತ್ರಕ್ಕೆ ಜೀವ ತುಂಬುತ್ತಾರೆ. ಮುಖ್ಯಮಂತ್ರಿಯಾಗಿ ಏಕಕಾಲದಲ್ಲಿ  ನಮ್ಮ ಮಾಜಿ ಮುಖ್ಯಮಂತ್ರಿಗಳನ್ನು, ಹಾಲಿ  ಮುಖ್ಯಮಂತ್ರಿಗಳನ್ನು ನೆನೆಪಿಸುತ್ತಾರೆ. ವಿ.ಮನೋಹರ್ ಸಂಗೀತ ಓಕೆ. ಸುಂದರ್ ನಾಥ ಸುವರ್ಣರ ಛಾಯಾಗ್ರಹಣ ಕಣ್ ಸೆಳೆಯುತ್ತದೆ.


ಕೊನೆಯದಾಗಿ, ನಿಮಗೆ time ಜಾಸ್ತಿ ಇದ್ದು, ಮಾಡಲು ಕೆಲಸವಿಲ್ಲದ್ದಿದ್ದಲ್ಲಿ ಈ ಚಿತ್ರ ನೋಡಬಹುದು.

Wednesday, December 09, 2009

Guna Mukhi

ಗುಣಮುಖಿ


ಈ ಹೊತ್ತಿಗೆಯ ಹೆಸರೇ ಮಾರ್ಮಿಕವಾಗಿದೆ. ಗುಣಮುಖಿ ಎಂದಾಕ್ಷಣ ನಮಗೆ ರೋಗಿಗಳ ನೆನಪಾಗುತ್ತದೆ. ಅವರು ಗುಣಮುಖರಾಗಲಿ ಎಂದೇ ಆಶಿಸುತ್ತೇವೆ. ಅದು ಸಹಜವೂ ಹೌದು. ಹಾಗೆಯೇ, ನಾವೆಲ್ಲಾ ಮಾನಸಿಕವಾಗಿ ಆರೋಗ್ಯವಂತರ? ಎಂದು ನಮ್ಮನ್ನೇ ಕೇಳಿಕೂಳ್ಳುವಂತಾಗಿದೆ. ಇವತ್ತಿನ ಈ ಸಂಕೀರ್ಣ ಬದುಕಿನಲ್ಲಿ ಜೀವನ ಮೌಲ್ಯಗಳು ಮತ್ತು ಅದರ ಅಳವಡಿಕೆ ಹುಡುಕಿದರೂ ಕಾಣ ಸಿಗದು.

ಇದೊಂದು ಕಥಾ ಗುಚ್ಛ. ಇಲ್ಲಿರುವ ಕಥೆಗಳಲ್ಲಿ ಜೀವನ ಪ್ರೀತಿ ಇದೆ. ಮೌಲ್ಯಗಳಿವೆ. ಹಾಗೆಯೇ, ಜೀವನ ಪಾಠವೂ ಇದೆ. ಕತ್ತಲಿಂದ ಬೆಳಕಿನೆಡೆಗೆ ದಾರಿ ದೀಪವಿದೆ. ಯೋಜಕರ ಮಾತಿನಲ್ಲೇ ಹೇಳುವುದಾದರೆ,

“ಕ್ಯಾನ್ಸರ್ ಮೊದಲಾದ ಮರಣಾಂತಿಕ ರೋಗಗಳಿಗೆ ತುತ್ತಾಗಿ ಸಾವಿನ ದಿನಗಳನ್ನುದುಃಖದಿಂದ ದೂಡುತ್ತಿರುವವರ ಹಾಗೂ ಸಣ್ಣ-ಸಣ್ಣ ತೊಂದರೆಗಳಿಗೂ ಹೆದರಿ ಇನ್ನು ಬದುಕೆಲ್ಲ ಕತ್ತಲಾಯಿತು ಎಂದು ಹತಾಶೆಗೊಂಡವರ ಆತ್ಮವಿಶ್ವಾಸವನ್ನು ತುಂಬುವ ಮತ್ತು ಸಾಂತ್ವಾನದ ಮಾತುಗಳಿಂದ ನಗುವನ್ನು ಚಿಮ್ಮಿಸಿ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲುವ ಕಥೆಗಳು ಇಲ್ಲಿವೆ. ಈ ಕಾರಣಕ್ಕಾಗಿ ’ಗುಣಮುಖಿ’ ಯನ್ನು ವಿಶೇಷವಾಗಿ ಕರ್ನಾಟಕದಲ್ಲಿರುವ ಸಾವಿರಾರು ಆಸ್ಪತ್ರೆಗಳಲ್ಲಿನ ಲಕ್ಷಾಂತರ ರೋಗಿಗಳಿಗೆ ಉಚಿತವಾಗಿ ಮುಟ್ಟಿಸಬೇಕೆಂಬ ಆಶಯ ನನ್ನದು”.

ಇವು ಕೇವಲ ರೋಗಿಗಳಿಗೆ ಮಾತ್ರವಲ್ಲದೇ ಸಣ್ಣ ಸೋಲಿಗೂ ಹೆದರಿ ಆತ್ಮಹತ್ಯೆಯಂತಹ ಅನಾಹುತ ಮಾಡಿಕೊಳ್ಳುವ ಯುವಜನಾಂಗಕ್ಕೆ ಒಂದು ದೀವಿಗೆ. ಈ ಕಥೆಗಳು ಚೈತನ್ಯದಾಯಕ. ಪ್ರತಿಯೊಬ್ಬರು ವಯಸ್ಸಿನ-ಜಾತಿಯ ಭೇದ ಮರೆತು ಓದಲೇಬೇಕಾದ ಕೃತಿ ಇದು.

ಹಾಗೆಯೇ, ಯೋಜಕರಿಗೆ ಇದನ್ನು ಉಚಿತವಾಗಿ ರೋಗಿಗಳಿಗೆ ತಲುಪಿಸುವ ಗುರಿ ಇದೆ. ಇದನ್ನು ಓದಿದ ಯಾವುದೇ ವೈದ್ಯಾಧಿಕಾರಿ, ವೈದ್ಯ, ಆಸ್ಪತ್ರೆ ಸಿಬ್ಬಂದಿ ಅವರನ್ನು ಭೇಟಿ ಮಾಡಿ ಈ ಪುಸ್ತಕ ಎಲ್ಲರಿಗೂ ತಲುಪುವಂತೆ ಮಾಡಲು ನನ್ನದೊಂದು ನಮ್ರ ವಿನಂತಿ.

ಈ ಕಿರು ಹೊತ್ತಿಗೆಯ ಒಂದು ಪ್ರಸಂಗ:

ಸಾಧು ಜೆ.ಪಿ. ವಾಸ್ವಾನಿ ಹೇಳಿದ ಕಥೆ ಇದು. ಪಿಶಾಚಿಯೊಂದು(ಸೈತಾನ) ತನ್ನ ನೌಕರಿಯನ್ನು ನಿಲ್ಲಿಸಲು ನಿರ್ಧರಿಸಿತು. ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ತಾನು ಧೀರ್ಘಕಾಲ ಉಪಯೋಗಿಸಿದ ಉಪಕರಣಗಳನ್ನು ಅಗ್ಗದ ಬೆಲೆಗೆ ಬಿಕರಿ ಮಾಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತು.

ಗಿರಾಕಿಗಳನ್ನು ಆಕರ್ಷಿಸುವ ಸಲುವಾಗಿ ಪಿಶಾಚಿಯ ಮನೆಯಂಗಳದಲ್ಲಿ ಉಪಕರಣಗಳನ್ನೆಲ್ಲ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇಂದ್ರಿಯಾಸಕ್ತಿ, ಸ್ವಾರ್ಥ, ಮಿಥ್ಯಾ ಪ್ರತಿಷ್ಠೆ, ಜಂಭ, ಹೊಟ್ಟೆಕಿಚ್ಚು, ವೈರ, ಕೋಪ, ದುರಾಶೆ, ಜಿಪುಣತನ, ಅಧಿಕಾರದಾಹ, ಕೀರ್ತಿ, ಕಾಮನೆ ಮುಂತಾದವುಗಳು ಬಲುಬೇಗನೆ ಮಾರಾಟವಾದವು. ಏಕೆಂದರೆ ಇವುಗಳ ಬೆಲೆ ತುಂಬ ಅಗ್ಗವಾಗಿತ್ತು ಮತ್ತು ಗಿರಾಕಿಗಳು ಬಹಳ ಬೇಗ ಬಂದು ವ್ಯವಹಾರ ಕುದುರಿಸಿ ಕೊಂಡರು.

ಆದರೆ ಸ್ವಲ್ಪ ತಡವಾಗಿ ಬಂದವರಿಗೆ ಕಾಣಸಿಕ್ಕಿದ್ದು ಎರಡೇ ಉಪಕರಣಗಳು. ಇವುಗಳಿಗೆ ಅಂಟಿಸಿದ ಬೆಲೆಗಳ ಚೀಟಿಗಳನ್ನು ನೋಡಿದವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಕ್ರಯ ಬಹಳ ದುಬಾರಿಯಾಗಿತ್ತು. ನಿರಾಶೆ ಮತ್ತು ಖಿನ್ನತೆಗಳೇ ಈ ಉಪಕರಣಗಳು.
ಗಿರಾಕಿಯೊಬ್ಬ ಪ್ರಶ್ನೆ ಮಾಡಿದ- “ಅದೇಕೆ ಈ ಉಪಕರಣಗಳಿಗೆ ಇಷ್ಟು ಬೆಲೆ? ಉಳಿದವನ್ನೆಲ್ಲ ಕೈಗೆಟಕುವ ಕ್ರಯಕ್ಕೆ ಮಾರಿದೆಯಲ್ಲ?”
“ಇವು ತುಂಬಾ ಶಕ್ತಿಶಾಲಿ ಉಪಕರಣಗಳು. ಉಳೀದೆಲ್ಲ ಸಲಕರಣೆಗಳು ಸೋತಾಗ ಮಾತ್ರ ನಾನು ಇವನ್ನು ಉಪಯೋಗಿಸುತ್ತಿದ್ದೆ. ಆದ್ದರಿಂದಲೇ ಇವು ಹೆಚ್ಚು ಸವೆದಿಲ್ಲ. ಮನುಷ್ಯನನ್ನು ನಿರಾಶೆಗೊಳಿಸಿದರೆ ಅವನು ಖಿನ್ನನಾಗುತ್ತಾನೆ. ಆಗ ಅವನು ಜೀವನದಲ್ಲಿ ಸೋಲುತ್ತಾನೆ” ಎಂದು ಪಿಶಾಚಿ ವಿವರಿಸಿತು.

ಖಿನ್ನತೆ ಮತ್ತು ಅದಕ್ಕೆ ಕಾರಣವಾದ ನಿರಾಶೆ ಎಂದಿಗೂ ಒಳ್ಳೆಯದಲ್ಲವೆಂದು ಈ ದೃಷ್ಠಾಂತ ಕಥೆಯು ಸಾರುತ್ತದೆ.

ಲೇಖಕರು: ಪ್ರೊ.ವಿ.ಬಿ.ಅರ್ತಿಕಜೆ
ಯೋಜನೆ: ಗೋವರ್ಧನ್ ಅಂಕೋಲೆಕರ್(93410-80609)

ಪ್ರಕಾಶಕರು: ವಿಶ್ವವ್ಯಾಪಿ ಗಣೇಶ ಪ್ರಕಾಶನ, ಸಾಗರ-577401

Tuesday, December 08, 2009

ಗುರುವೇ ನಮನ


ಲೇ: ಅನು
ಸಂ: ಅಭಿ

ಗುರುವೇ ನಮನ

ಜ್ಞಾನಸಾಗರದೊಳಗೆ ಗುರುವೋ,
ಜ್ಞಾನಿ ಗುರುವಿನರಿವೇ ಸಾಗರವೋ,
ಸಾಗರ ಸಮ್ಮುಖವೆ ಸಂಯೋಗವೋ
        ಗೀತ ಮಾತಿನ ಒಳಗೋ
        ಮಾತು ಗೀತದ ಒಳಗೋ
        ಮಾತು ಗೀತಗಳೆರಡೂ ಮಾಧುರ್ಯದೊಳಗೋ
ಮಧು ಗಾನದೋಳಗೋ
ಗಾನ ಮಧುವಿನ ಒಳಗೋ
ಗಾನಮಧುರಭಾವವೇ ವಾದನವೋ
        ನಾದ ವಾದ್ಯದ ಒಳಗೋ
        ವಾದ್ಯ ನಾದ ಒಳಗೋ
        ನಾದ ವಾದ್ಯಗಳೆರಡೂ ಬೆರಳ ಫಲಿಲೊಳಗೋ
ಅರಿವು ಬೆರಳ ನಡೆಯೋ
ಬೆರಳ ನಡೆಯೇ ಅರಿವಿನಳವೋ
ವಾದವಾದ್ಯ ಜ್ಞಾನವೆಲ್ಲ ಕೃತಿಯ ಬೆರಗೋ

        ಕೃತಿಧಾರೆ ಗುರುವೋ
        ಗುರುವೆ ಕೃತಿಧಾರೆಯೋ
        ಗುರು-ಕೃತಿ ಸಮ್ಮುಖವೆ ಸುಕೃತವೋ.....
                                        ಗುರುವೇ ನಮನ

ಧ್ವನಿ


ಲೇ: ಅನು
ಸಂ: ಅಭಿ

    ಧ್ವನಿ

ನಾವಿದ್ದೇವೆ ಕತ್ತಲ ಕೂಪದೊಳಗೆ
ಸದ್ದು ಗದ್ದಲದ ಸಂತೆಯೊಳಗೆ
ಇಲ್ಲಿದೆ ಬೇಕಾದ್ದು, ಬೇಡಾದ್ದು
ಸರಕುಸರಂಜಾಮು ಸುಮಾರಾದ್ದು

ಸದ್ದಿಲ್ಲದ ತಾವು ಮಾತ್ರ ಇಲ್ಲಿಲ್ಲ
ಅನತಿ ದೂರದ ಇನಿದನಿ ಕೇಳುವುದಿಲ್ಲ

ಇದು ಚಕ್ರವ್ಯುಹ ಒಳಬರುವ ದಾರಿ ನೂರಾರು    
ದಾಟಿ ಬರಲು ಅಡ್ಡಿ-ಆತಂಕ, ಅಜ್ಞಾನ ನೂರು   

ಬಾಗಿಲು ಮುಚ್ಚಿದೆ, ಕಿಟಿಕಿ ಬಿಗಿದಿದೆ
ಗದ್ದಲದ, ಕತ್ತಲಲಿ ದಿಶೆತೋರದಿದೆ
ಬೆಳಕಿನೊಂದು ಕಿರಣಕೆ
ಕಣ್ತೆರೆಯ ಬೇಕಿದೆ ನಾವು ಅಂತರಾಳದ ಅಂತಃಸ್ವತ್ವದ ದನಿಯ
ಕೇಳಬೇಕಿದೆ ನಾವು, ಇಂದು; ಎಂದೆಂದೂ.......

Friday, December 04, 2009

Kannada Film Industry:: Crisis

ಕನ್ನಡ ಚಿತ್ರರಂಗ: ಅವಸಾನದ ಹಾದಿಯಲ್ಲಿ

ಇತ್ತೀಚಿಗೆ ಕನ್ನಡ ಚಿತ್ರರಂಗದ ’ಗಣ್ಯರು’ ಸಭೆ ಸೇರಿ ಕ್ರಿಯಾಸಮಿತಿ ರಚಿಸಿ ಚಿತ್ರದ ಗುಣಮಟ್ಟ ಹೆಚ್ಚಿಸಲು ಮತ್ತು ಚಿತ್ರರಂಗವನ್ನು ’ಮೇಲೆತ್ತಲು’ ಅನೇಕಾನೇಕ ನಿರ್ಧಾರಗಳನ್ನು ಪ್ರಕಟಿಸಿದೆ.

ಒಂದು ಚಿತ್ರ ಕೇವಲ 45 ದಿನಗಳಲ್ಲಿ ಶೂಟಿಂಗ್ ಮುಗಿಸಬೇಕೆಂಬ ನಿರ್ಧಾರವಿದೆಯಲ್ಲಾ? ಅದನ್ನು ಕ್ರಿಯಾಸಮಿತಿ ನಿರ್ಧರಿಸಲು ಸಾಧ್ಯವೇ? ಒಂದು ಚಿತ್ರದ ಶೂಟಿಂಗ್, ಪೋಸ್ಟ್-ಪ್ರೊಡಕ್ಷನ್ ಕೆಲಸಕ್ಕೆ ಇತಿ-ಮಿತಿ ಇಲ್ಲ. ಇರಕೂಡದು. ಅದನ್ನು ನಿರ್ಧಾರಿಸುವುದು ಚಿತ್ರಕತೆ ಮತ್ತು ನಿರ್ದೇಶಕ ಮಾತ್ರ. ಈ ರೀತಿಯ ಒತ್ತಡ ಹೇರುವ ಮೂಲಕ ಆತನ ಕ್ರಿಯಾಶೀಲತೆಗೆ ಕಡಿವಾಣ ಹಾಕಿದಂತೆ. ಎಲ್ಲೊ ದಿನೇಶ್ ಬಾಬು ತರದವರು 10-12 ದಿನಗಳಲ್ಲಿ ಚಿತ್ರ ಮುಗಿಸುತ್ತಾರೆ. ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹಾಗೆ ನೋಡಿದರೆ ದೃಶ್ಯ ಮಾಧ್ಯಮ ಕೇವಲ ನಿರ್ದೇಶಕರ ಮಾಧ್ಯಮ. ಆತನ ಮೇಲೆ ಈ ಪರಿ ನಿರ್ಬಂಧ ಹೇರೋದು ಯಾವ ನ್ಯಾಯ?

ಚಿತ್ರ ನಿರ್ಮಾಣಕ್ಕೆ ನಿರ್ದೇಶಕ ಎಷ್ಟು  ಮುಖ್ಯಾನೋ ಅಷ್ಟೇ ಮುಖ್ಯ ನಿರ್ಮಾಪಕ. ಯಾವುದೋ ಹುಚ್ಚು ಆವೇಶದಲ್ಲಿ ಅತಿಯಾದ ದುರಾಸೆಯಿಂದ ಚಿತ್ರ ನಿರ್ಮಾಣಕ್ಕೆ ಇಳಿಯುವ ನಿರ್ಮಾಪಕರು ಸರಿಯಾದ ನಿರ್ದೇಶಕರನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಆ ವೈಫಲ್ಯವನ್ನು ನಿರ್ದೇಶಕರ ಮೇಲೆ ಗೂಬೆ ಕೂರಿಸುವ ಮೂಲಕ ಸಮಾಧಾನ ಪಟ್ಟಿದ್ದಾರೆ.

2009 ಇಸವಿಯಲ್ಲಿ ಬಿಡುಗಡೆಯಾದ ಚಿತ್ರಗಳು 109. ಅದರಲ್ಲಿ ಯಶಸ್ವಿ ಅನಿಸಿಕೂಂಡದ್ದು ಬೆರಳೆಣಿಕೆಯಷ್ಟು ಮಾತ್ರ.ಈ ಸಂದರ್ಭದಲ್ಲಿ ಗುಣಮಟ್ಟ ಕುಸಿದಿದೆ ಅನ್ನುವುದು ವಿಧಿತ. ಅದಕ್ಕೆ ಕಾರಣ ಹುಡುಕಿದರೆ ಸಿಗುವ ಉತ್ತರ ನಿರ್ಮಾಪಕನ ದುರಸೆ ಮತ್ತು ನಿರ್ದೇಶಕನ ವೈಫಲ್ಯ. ಹಾಗಾದರೆ, ನಿರ್ದೇಶಕನಿಗೆ ಅನುಭವ ಇರಲೇಬೇಕು ಮತ್ತು ಆತ ಕನಿಷ್ಠ ೫ ಚಿತ್ರಗಳಿಗಾದರೂ ಸಹಾಯಕನಾಗಿ ದುಡಿದಿರಬೇಕು ಅನ್ನೋ ವಾದಕ್ಕೆ ಪುಷ್ಠಿ ದೂರೆಯುತ್ತದಾ? ಖಂಡಿತ ಇಲ್ಲ. ಅಪ್ಪಟ ಕ್ರಿಯಾಶೀಲ ಮಾಧ್ಯಮವಾದ ದೃಶ್ಯ ಮಾಧ್ಯಮವನ್ನು ಹೇಗೆ ಬಳಸಬೇಕು, ತನ್ನ ನಿಲುವನ್ನು ಹೇಗೆ ಪ್ರೆಸೆಂಟ್ ಮಾಡಬೇಕು ಗೊತ್ತಿಲ್ಲದ ನಿರ್ದೇಶಕರು ಚಿತ್ರವನ್ನು ಕೆಡಿಸುತ್ತಾರೆ. ಈ ವರ್ಷದಲ್ಲಿ ಬಿಡುಗಡೆಯಾದ ಚಿತ್ರಗಳು ತಾಂತ್ರಿಕವಾಗಿ ಉತ್ತಮವಾಗಿ ಮೂಡಿ ಬಂದಿದೆ. ಅದ್ಭುತವೆನಿಸುವಂತಹ ಸಂಗೀತವಿದೆ, ಸಾಹಿತ್ಯವಿದೆ. ಛಾಯಾಗ್ರಹಣವಿದೆ. ಆದರೆ ಅದನ್ನೆಲ್ಲಾ ಬಳಸುವಲ್ಲಿನಿರ್ದೇಶಕ ಎಡವಿದ್ದಾನೆ. ಚಿತ್ರ ಮಕಾಡೆ ಮಲಗಿದೆ. ಪ್ರೇಕ್ಷಕ ಥಿಯೇಟರ್ ಕಡೆ ತಲೆ ಹಾಕಿ ಮಲಗೋದಿಲ್ಲ.

ಈ ಸಾಲಿನಲ್ಲಿ ಬಿಡುಗಡೆಯಾದ ಯಾವೂಂದು ಚಿತ್ರವೂ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗಿಲ್ಲ. ದೊಡ್ಡ-ದೊಡ್ಡ ಬ್ಯಾನರ್ ಗಳ ಚಿತ್ರಗಳು ಪ್ರೇಕ್ಷಕನ ನಿರೀಕ್ಷೆಯನ್ನು ಹುಸಿ ಮಾಡಿವೆ. ಅದಕ್ಕೆ ಕಾರಣ ಗುಣಮಟ್ಟ. ಜನರಿಗೆ ಇಷ್ಟವಾಗುವಂತಹ ಮೌಲ್ಯಧಾರಿತ ಚಿತ್ರಗಳೆಲ್ಲಿ ಬಂದಿವೆ? ಅದೇ ಹಳೆಯ ಸಿದ್ಧ ಸೂತ್ರಗಳನ್ನಿಟ್ಟುಕೂಂಡು ಚಿತ್ರ ಮಾಡಿದರೆ ಯಾವ ಪ್ರೇಕ್ಷಕ ಬರುತ್ತಾನೆ?? ಅವನ ತಾಳ್ಮೆಗೂ ಒಂದು ಮಿತಿ ಇದೆ. ಒಂದೇ ಕತೆ ಇರುವ ಎಷ್ಟು ಚಿತ್ರಗಳನ್ನು ನೋಡಬಲ್ಲ?? ಅಂಬಾರಿ- ಅಮೃತಧಾರೆ; ವೀರ ಮದಕರಿ- ಕಿರಣ್ ಬೇಡಿ , ಹೀಗೆ ತುಂಬಾ ಉದಾಹರಣೆಗಳು ನಮ್ಮ ಮುಂದಿವೆ. ಸ್ವಲ್ಪ ತಿರುವು-ಮುರುವು ಮಾಡಿ ಅದೇ ಕತೆಯನ್ನು ಹೇಳಿದರೆ ಯಾರೂ ನಮ್ಮ ಕಡೆ ನೋಡೋದಿಲ್ಲ. ಅದಕ್ಕೆ ಸರಿಯಾಗಿ ಪರಭಾಷಾ ಚಿತ್ರಗಳ ಹಾವಳಿ. ಮೇಲಾಗಿ ಒಂದೆ ವಾರದಲ್ಲಿ 3-4 ಕನ್ನಡ ಚಿತ್ರಗಳು ಬಿಡುಗಡೆಯಾದರೆ ಯಾವುದನ್ನು ನೋಡಲು ಸಾಧ್ಯ? ಈ ಪರಿ ಪೈಪೋಟಿ ಯಾಕೆ?? ಪರಭಾಷೆಗಲ್ಲಿ ಈ ಪೈಪೋಟಿ  ಇಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ’ಮಗಧೀರ’ ಆ ಚಿತ್ರ ಬಿಡುಗಡೆಯ ಮುಂಚಿನ ವಾರ ಯಾವೂಂದು ತೆಲುಗು ಸಿನಿಮಾ ಬಿಡುಗಡೆಯಾಗಲಿಲ್ಲ.ಬಿಡುಗಡೆಯಾಗಿ ಮತ್ತೆರಡು ವಾರ ಮತ್ತೊಂದು ಚಿತ್ರ ಬಿಡುಗಡೆಯಾಗಲಿಲ್ಲ. ಅದರ ಬಿಸಿ ’ರಾಜ್’ ಚಿತ್ರಕ್ಕೂ ತಟ್ಟಿತು. ಕೇವಲ ಟ್ರೈಲರ್ ಇಂದ ಪ್ರೇಕ್ಷಕನನ್ನು ಥಿಯೇಟರ್ ಗೆ ಎಳೆದ ಚಿತ್ರ ’ಮಗಧೀರ’. ಆ ಮಾತ್ರದ ಹೊಂದಾಣಿಕೆ ಇಲ್ಲವೆಂದರೆ ಚಿತ್ರರಂಗದ ಉದ್ಧಾರ ಸಾಧ್ಯನಾ?? ಚಿತ್ರದ ಕತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಿ. ಅದನ್ನ ಬಿಟ್ಟು ಅರ್ಥವಿಲ್ಲದ ನಿರ್ಧಾರಗಳನ್ನು ಫರ್ಮಾನು ಹೊರಡಿಸಬೇಡಿ.
ಕನ್ನಡ ಚಿತ್ರ ಸಂಗೀತದಲ್ಲೂ ಅದೇ ಚಾಳಿ. ಅದೇ ಹಳೆಯ ರಾಗಗಳನ್ನು ಅದೇ ಗಾಯಕರಿಂದ ಹಾಡಿಸೋ ಪರಿಪಾಠವೇಕೆ? ಜಯಂತ ಕಾಯ್ಕಣಿ- ಸೋನು ನಿಗಮ್- ಮನೋ ಮೂರ್ತಿ ಅದ್ಭುತ ಕಾಂಬಿನೇಷನ್ನು. ಆದರೆ, ಮನೋ ಮೂರ್ತಿಗೂ, ಸೋನು ನಿಗಮ್ ಗೆ ಹೂಸದೇನನ್ನೂ ನೀಡಲು ಸಾಧ್ಯವಾಗಿಲ್ಲ. ಅದೇ ಅನಿಸುತಿದೆ........ ಇದ್ದುದರಲ್ಲಿ ಜಯಂತ ಕಾಯ್ಕಿಣಿಯ ಸಾಹಿತ್ಯ ಹೂಸತನದಿಂದ ಕೂಡಿದೆ. ದೇಶಿ ಗಾಯಕರಿಲ್ಲವೇ? ತಪ್ಪು ತಪ್ಪು ಉಚ್ಚಾರಣೆ ಮಾಡೋ ಸೋನು ಯಾಕೆ??

ಎಲ್ಲಾ ಉದ್ಯಮದಲ್ಲಿ ಇದ್ದ ಹಾಗೆ ಇಲ್ಲೂ ಕೂಡ ಅನುಭವ ಅತಿ ಮುಖ್ಯ. ಆದರೆ, ಬಹುತೇಕ ಮಂದಿಗೆ ಇದೊಂದು ಹವ್ಯಾಸ. ಚಿತ್ರ ನಿರ್ಮಾಣದ ಅ. ಆ. ಇ. ಈ ಗೊತ್ತಿಲ್ಲದ ಮಂದಿ ಚಿತ್ರ ನಿರ್ಮಣಕ್ಕೆ ಇಳಿದರೆ ಅವರಿಂದ ಎಂತಹ ಚಿತ್ರ ನಿರೀಕ್ಷಿಸಲು ಸಾಧ್ಯ? ಚಿತ್ರರಂಗವನ್ನು ಕಾಡುತ್ತಿರುವ ಮತ್ತೂಂದು ಪಿಡುಗು ರಿಮೇಕ್. ಯಾವುದೋ ಭಾಷೆಯಲ್ಲಿ ಚೆನ್ನಾಗಿ ಹೆಸರು-ದುಡ್ಡು ಮಾಡಿರುವ ಚಿತ್ರವನ್ನು ಕನ್ನಡೀಕರಿಸಿ ಅದನ್ನು ಪ್ರೇಕ್ಷಕರ ಮುಂದೆ ಇಡುವ ಪರಿಪಾಠ ಎಷ್ಟರ ಮಟ್ಟಿಗೆ ಸರಿ? ಆ ಚಿತ್ರ ಬೇರೂಂದು ನಾಡಿನಲ್ಲಿ ಯಶಸ್ವಿಯಾಗಲು ಕಥೆಯ ಜೊತೆಗೆ ತಾಂತ್ರಿಕ ವರ್ಗ, ಕಲಾವಿದರು ಕಾರಣ. ಕರ್ನಾಟಕದಲ್ಲಿ ಆ ಮಟ್ಟಿಗಿನ ಆರಾಧನೆ ಇಲ್ಲ. ದಿ| ಡಾ. ರಾಜ್ ಕುಮಾರ್ ಹೊರತಾಗಿ ಬೇರೆ ಯಾರನ್ನು ಜನ ಆ ಪರಿ ಆರಾಧಿಸಲಿಲ್ಲ. ಹಾಗಿರಬೇಕಾದರೆ ರಿಮೇಕ್ ಯಾಕೆ? ಕನ್ನಡದಲ್ಲಿ ಕತೆಗಳಿಲ್ವಾ? ಕತೆಗಳ ಬಗ್ಗೆ ಚಿತ್ರರಂಗದ ಹಿರಿಯರೂಬ್ಬರು ಸಿನಿಮಾಗೆ ಕತೆ ಬರಯಲು ಇಲ್ಲಿ ಯಾರಿಗೂ ಗೊತ್ತಿಲ್ಲ ಎಂದು ಉದ್ಗರಿಸಿದ್ದರು. ಆದರೆ,  ಎಷ್ಟು ಕಾದಂಬರಿ ಆಧಾರಿತ ಚಿತ್ರಗಳು ಬಂದಿಲ್ಲ?? ಇತ್ತೀಚಿಗೆ ಬಾಲಿವುಡ್ ಪ್ರಸ್ತುತ ವಿದ್ಯಾಮಾನಗಳನ್ನು ಆಧಾರಿಸಿ ಚಿತ್ರ ಮಾಡಲಾರಂಭಿಸಿದ್ದಾರೆ. ಆ ಪ್ರಯತ್ನ ನಾವೇಕೆ ಮಾಡಬಾರದು? ಇನ್ನಾದರೂ ಚಿತ್ರರಂಗ ವೃಥಾ ಆರ‍ೋಪ-ಪ್ರತ್ಯಾರೋಪಗಳನ್ನು ಬಿಟ್ಟು ಅದ್ಭುತ ಚಿತ್ರಕತೆಗಳನ್ನು ಸಿದ್ಧಪಡಿಸಿ ತೆರೆಗೆ ಅರ್ಪಿಸಿದರೆ ಪ್ರೇಕ್ಷಕ ಅದನ್ನು ಸ್ವಾಗತಿಸುತ್ತಾನೆ. ಚಿತ್ರರಂಗ ಉಳಿಯುತ್ತೆ.   

Tuesday, November 10, 2009

Sarpa Sambandha

ಸರ್ಪ ಸಂಬಂಧ

ಒಂದು ಸುಧೀರ್ಘ ಸರ್ಪ ವ್ರುತ್ತಾಂತ. ಓದಿ ಮುಗಿಸಿದರೆ ಮನೆಯಲ್ಲಾ ಹುತ್ತ! ಆ ಪರಿ ಕಾಡಿದ ಕಾದಂಬರಿ ಇದು. ದೇವರಿದ್ದಾನೋ-ಇಲ್ವೋ ಆದರೆ ಅದರ ಸುತ್ತ ಪೂಜೆ-ಪುನಸ್ಕಾರ-ಹೋಮ-ಹವನ ಮುಂತಾದವು ಬೆಳೆದಿದೆ. ಹಾಗೆಯೇ ದೆವ್ವವಿದೆಯೋ ಇಲ್ವೋ ಅದರ ಸುತ್ತ ಕೂಡ ಇಂಥದೇ ಒಂದು ವಾಮ ಪ್ರಪಂಚ ಬೆಳೆದಿದೆ ಎಂಬ ಲೇಖಕರ ಮಾತಿನಂತೆ ಸರ್ಪ ಕಾಡುತ್ತೆ; ಮನುಷ್ಯ ಸಂಬಂಧಗಳು ಕಾಡುತ್ತೆ.. ಕೂನೆ ತನಕ ತನ್ನ ನಿಗೂಢತೆ ಉಳಿಸಿಕೊಳ್ಳುತ್ತದೆ.


ಅಳ್ಳೆದೆಯವರು ಓದಲು ಸಾಧ್ಯವಾಗದಂತಹ ಕೌರ್ಯವಿದೆ. ’ಇನಿ’ ಎಂಬ ಮುದ್ದಾದ ಹೆಸರಿನ ಪುಟ್ಟ ಹುಡುಗಿ ಸರ್ಪ ಸಂತಾನ. ಸರ್ಪ ಶಿಶು. ಇನಿ ಎಂಬ ಮುದ್ದಿನ ಹೆಸರಿಗೂ ಅದರ ನಡವಳಿಕೆಗೂ ಅಕ್ಷರಶಃ ತಾಳೆಯಾಗದು. ಒಂದೇ ಬಾರಿ ಮಮಕಾರ ಮತ್ತು ಭಯ ಬೆರೆತ ಆಶ್ಚರ್ಯವಿದೆ ಆ ಪಾತ್ರದಲ್ಲಿ. ಈ ಪಾತ್ರ ಪೋಷಣೆಯಲ್ಲಿ ಲೇಖಕ ದಿಗ್ವಿಜಯಿ.


ಮಾಟಗಾತಿಯ ಮುಂದುವದಿದ ಭಾಗವಾದ್ದರಿಂದ ನಮಗೆ ಅಗ್ನಿನಾಥ ಗೊತ್ತು. ತೇಜಮ್ಮ ಗೊತ್ತು. ನಿಹಾರಿಕೆ ಗೊತ್ತು. ಆದರೆ, ಅಚ್ಚರಿ ಹುಟ್ಟಿಸುವುದು ಇನಿಯ ಪಾತ್ರ ಪೋಷಣೆ. ಸುಮಾರು ಒಂದೂವರೆ ದಶಕ ಕಾದು ಗುಣಶಾರಿ ಇನಿಗೆ ಜನ್ಮ ನೀಡುತ್ತಾಳೆ. ಅದು ಸರ್ಪ ಸಂತತಿ. ಈ ಕಲ್ಪನೆಯೇ ರೋಚಕ. ಮನುಷ್ಯರ ಹೊಟ್ಟೆಯಲ್ಲಿ ಸರ್ಪ ಜನ್ಮ ತಾಳುವುದೆಂದರೆ? ಎಲ್ಲೂ ಕೂಡ ಲಿಂಕ್ ತಪ್ಪದಂತೆ ಒಂದೆ ಸಮನೆ ಹರಿಯುವ ಝರಿಯಂತೆ ಸಾಗುವಲ್ಲಿ ಕಾದಂಬರಿ ಯಶಸ್ವಿಯಾಗಿದೆ. ಯಶಸ್ಸಿನ ತುತ್ತುದಿ ತಲುಪುವ ಪ್ರಯತ್ನದಲ್ಲಿ ಮನುಷ್ಯ ಈ ಪರಿ ಕ್ರೂರಿಯಾಗಲು ಸಾಧ್ಯವೆ ಅಂತ ಅಚ್ಚರಿ ಹುಟ್ಟಿಸುತ್ತಾಳೆ ಮಾಟಗಾತಿ.


ಅಸಲು ಆಕೆ ಅಮಾಯಕಿಯಲ್ಲ, ಪ್ರಾಣಿಯಲ್ಲ, ಪಕ್ಷಿಯಲ್ಲ, ಮನುಷ್ಯಳು ಅಲ್ಲ ಎಂಬ ತೀರ್ಮಾನಕ್ಕೆ ಅಗ್ನಿನಾಥ ಬರುವ ಹೊತ್ತಿಗೆ ಅವಳು ಕೌರ್ಯದ ತುತ್ತುದಿ ತಲುಪಿರುತ್ತಾಳೆ. ಇದಕ್ಕೆ contrast ಆಗಿ ಅಗ್ನಿನಾಥನ ಬೆಳೆದಿದ್ದಾನೆ. ಅಗ್ನಿನಾಥನೆಂಬ ಹೆಸರೆ ನಮಗೆ ಎಂದು ರೀತಿಯ ಸಂಚಲನ ಉಂಟು ಮಾಡುತ್ತೆ. ಅವನ ಆತ್ಮವಿಶ್ವಾಸ ನಮಗಿರಬಾರದೇ ಅಂತಲೂ ಅನಿಸುತ್ತದೆ. ಸಾಧನೆಯ ಗಿರಿಶಿಖರ ತಲುಪಿದರೂ ಮನುಷ್ಯ ಸೌಮ್ಯನಾಗಿರಬಲ್ಲ ಎಂಬುದಕ್ಕೆ ನಿದರ್ಶನದಂತೆ ನಿಲ್ಲುತ್ತಾನೆ ಅಗ್ನಿನಾಥ.


ಇದೆಲ್ಲದರ ನಡುವೆ ನಮಗೆ ವಿಶ್ವನಾಥ-ಚಿತ್ರಾ ಎದುರಾಗುತ್ತಾರೆ. ಅಗತ್ಯವಿರದೆ ಸುಮ್ಮನೆ ಕಾದಂಬರಿಯೊಳಕ್ಕೆ ಅತಿಕ್ರಮ ಪ್ರವೇಶ ಮಾಡಿಬಿಡುತ್ತಾರೆ. ಮತ್ತು ನಮ್ಮ ಕಲ್ಪನೆಯ ಓಘಕ್ಕೂ ಕಡಿವಾಣ ಹಾಕುತ್ತಾರೆ. ವಾಮ ಪ್ರಪಂಚದಲ್ಲಿ ತೇಲಿ ಮುಳುಗುವ 
ನಮಗೂಂದು relief ಕೂಡಲು ಲೇಖಕರು ಮುಂದಾಗಿದ್ದಾರಾ? ಗೊತ್ತಿಲ್ಲ.


ಮಾಟಗಾತಿ-ಸರ್ಪ ಸಂಬಂಧ ಒಂದು ಕಾಲ್ಪನಿಕ ಕಾದಂಬರಿ. Work of fiction. ಆದರೆ, ಇದರ ಪಾತ್ರಗಳು ಕಾಲ್ಪನಿಕವೆಂಬಂತೆ ರೂಪುಗೂಂಡಿಲ್ಲ. ಎಲ್ಲರಲ್ಲೂ ತೇಜಮ್ಮ ಎಂಬೋ ಮಾಟಗಾತಿ ಇದ್ದಾಳೆ; ಅಗ್ನಿನಾಥನಿದ್ದಾನೆ. ನಿಹಾರಿಕೆಯಿದ್ದಾಳೆ. ಒಂದು ಕಾದಂಬರಿಯ ಗೆಲುವು ಅದೇ ಅಲ್ಲವೇ?
ತಂತ್ರ-ಮಂತ್ರಗಳ ಕುರಿತಾಗಿ ಕನ್ನಡದಲ್ಲಿ ಬಂದಿರುವ ಕೆಲವೇ ಕಾದಂಬರಿಗಲ್ಲಿ ಮಾಟಗಾತಿ-ಸರ್ಪ ಸಂಬಂಧ ಮುಂಚೂಣಿಗೆ ಬಂದು ನಿಲ್ಲುತ್ತದೆ. ಹಾಗೆ ಅದರ ಜೊತೆಯಲ್ಲೇ ಬರುವ ಮತ್ತೊಂದು ಕಾದಂಬರಿ ತುಳಸೀದಳ-ತುಳಸೀ.

ಲೇಖಕರು: ರವಿ ಬೆಳೆಗೆರೆ
ಪ್ರಕಾಶಕರು: ಭಾವನ ಪ್ರಕಾಶನ, ಬೆಂಗಳೂರು.


ಪ್ರತಿಗಳಿಗಾಗಿ ಸಂಪರ್ಕಿಸಿ:


 ಸಪ್ನ ಬುಕ್ ಹೌಸ್
ಪುಲಿಯಾನಿ ಬುಕ್ ಹೌಸ್
ಭಾವನ ಪ್ರಕಾಶನ
www.books.yulop.com

Sunday, November 08, 2009

pramaPrama


ಆವತ್ತು  ಆಕೆ ಒಳ್ಳೆಯ ಲಹರಿಯಲ್ಲಿದ್ದಳು. ಅವನು ಸಿಕ್ಕಿದ್ದ. ಸಲೀಂ. ಅವನನ್ನು ಭೇಟಿ ಆದಾಗಲೆಲ್ಲಾ ಮನಸು ಹಕ್ಕಿ ಆಗಿರುತ್ತೆ. ಅದೇ ಲಹರಿಯಲ್ಲಿ ಮನೆಗೆ ಬಂದಳು.


ಅಮ್ಮ ಯಥಾಪ್ರಕಾರ ಅಡುಗೆ ಮನೆಯಲ್ಲಿದ್ದಳು. ಅಪ್ಪ ಹಾಲ್ ನಲ್ಲಿ ಕೂತಿದ್ದರು. ಮುಖ ಗಂಟಿಕ್ಕಿತ್ತು. ಕಣ್ಣು ಕೆಂಪಗಿದ್ದವು. ಈವತ್ತೆನೊ ಮಹಾ ಮಂಗಳಾರತಿ ಕಾದಿದೆ ಅನಿಸಿತು ಅವಳಿಗೆ. ನೇರವಾಗಿ ರೂಮಿಗೆ ಹೋದಳು. ಬಟ್ಟೆ ಬದಲಿಸಿ ಅಡುಗೆ ಮನೆಗೆ ಬಂದಳು.


ಅಮ್ಮನ ಮುಖದಲ್ಲಿ ಕಳವಳವಿತ್ತು. ಏನಾಯ್ತು ಎಂಬಂತೆ ಕಣ್ಣಲ್ಲೆ ಕೇಳಿದಳು. ಅಮ್ಮ ಉತ್ತರಿಸಲಿಲ್ಲ. ಅವಳಿಗೆ ಏನೋ ಜರುಗಲಿದೆ ಎಂದು ಖಾತ್ರಿಯಾಯ್ತು. ಬಹುಶಃ ಅವಳ ಅಣ್ಣನ ಉಪಟಳ ಅಂದುಕೊಂಡಳು. ಅವಳ ಅಣ್ಣ ಶ್ರೀಹರಿ ಚಿಕ್ಕಂದಿನಲ್ಲಿ ಅಪಾರ ಬುದ್ದಿವ೦ತಿಕೆಯ ಹುಡುಗನಾಗಿದ್ದ. ಬ್ರಾಹ್ಮಣ ರ ಬೀದಿಯಲ್ಲಿದ್ದ ಶಾಲೆಗೆ ಹೋಗುತ್ತಿದ್ದ. ಜೊತೆಗೆ ವೇದಾಧ್ಯಯನ ಕೂಡ ಆಗುತ್ತಿತ್ತು. PUC ತನಕ ಎಲ್ಲಾ ಸರಿಯಾಗಿ ಇತ್ತು. ಡಿಗ್ರೀ ಗೆ ಅಂತ ಮಲ್ಲೇಶ್ವರದ ಕಾಲೇಜು ಸೇರುವ ತನಕ. ಎಲ್ಲಾ ಕೆಟ್ಟ ಚಟಗಳು ಅಂಟಿಕೂಂಡವು.ಜೊತೆಗೆ ಗಲಾಟೆಗಳು-ಬೀದಿ ಜಗಳ. ಹೆಚ್ಚು ಕಡಿಮೆ ರೌಡಿಯೇ ಆಗಿದ್ದ. ತುಂಬ ಸಲ ಕಾಲೇಜಿನ principal ಫೋನ್ ಮಾಡಿ ಅವನ ಪ್ರತಾಪಗಳನ್ನು ವರ್ಣಿಸಿದ್ದರು. ಮತ್ತೆ repeat ಆದರೆ ಅವನನ್ನು ಡಿಬಾರ್ ಮಾಡುವುದಾಗಿ ಎಚ್ಚರಿಸಿದ್ದರು. ಅವರು ಹೇಳಿದಂತೆಯೇ ಶ್ರೀಹರಿ ಡಿಬಾರ್ ಕೂಡ ಆದ. ಆವತ್ತು ಮನೆಯಲ್ಲಿ ಕುರುಕ್ಷೇತ್ರವೇ ನಡೆದಿತ್ತು. ದೇವಸ್ಥಾನದ ಅರ್ಚಕರಾದ ಅಪ್ಪ ಭೂಮಿ-ಆಕಾಶ ಒಂದು ಮಾಡಿದ್ದರು. ಕೆಲ ದಿನ ಶ್ರೀಹರಿ ಮನೆ ಬಿಟ್ಟು ಹೋದ. ಆದರೂ ಅವನ ಬಗ್ಗೆ ಆಗಾಗ್ಗೆ ತಿಳಿಯುತ್ತಲಿತ್ತು. ಇವತ್ತು ಕೂಡ ಎನೋ ಘನಂದಾರಿ ಕೆಲಸ ಮಾಡಿದ್ದಾನೆ ಅಣ್ಣ. ಹಾಗಾಗಿ ಅಪ್ಪನ ಕೋಪ ನೆತ್ತಿಗೇರಿದೆ ಅಂತ ಅಂದುಕೂಂಡಳು.


ರುಕ್ಮಿಣಿ ಅಂತ ಕರೆದರು ವೇಣುಗೋಪಾಲಯ್ಯ. ಬೆದರಿದ ಜಿಂಕೆಯಂತೆ ರುಕ್ಮಿಣಿ ಅವರ ಬಳಿಗೆ ಹೋಗಿ ನಿಂತಳು.
ಯಾರದು? ಕಂಚಿಗೆ-ಕಂಚು ತಾಗಿದ ಧ್ವನಿ.
ಯಾರಪ್ಪ? ರುಕ್ಮಿಣಿಯ ಮುಗ್ಧ ಪ್ರಶ್ನೆ..
ನಿನ್ನ ಜೊತೆ ಇದ್ದ ಹುಡುಗ?
ಯಾವ ಹುಡುಗ? ಅದೇ ಮುಗ್ಧತೆಯಲ್ಲೇ ಪ್ರಶ್ನಿಸಿದಳು.
ಏನು ಗೊತ್ತಿಲ್ಲದವಳ ತರಹ ಆಡಬೇಡ. ನೀವಿಬ್ಬರೂ ಆ ರಸ್ತೆ ತುದಿಯಲ್ಲಿ ಕೈ-ಕೈ ಹಿಡಿದುಕೂಂಡು ಬಾರ್ತಾ ಇರಲಿಲ್ಲ? ಗಡುಸಾಗಿತ್ತು ದನಿ.
………………
ಯಾರವನು? ನಿನಗೂ- ಅವನಿಗೂ ಏನು ಸಂಬಂಧ?
ಓ ಅವನಾ? ಸಲೀಂ ಅಂತ. ನನ್ನ classmate. ಅವನ ಮನೆ ಇಲ್ಲೇ ಇರೋದು ದರ್ಗಾದಲ್ಲಿ. ತುಂಬಾ ಒಳ್ಳೆಯ ಹುಡುಗ.ಹಾಗೆ ಮಾತಾಡಿಕೂಂಡು ಬರ್ತಾ ಇದ್ವಿ. ಅವಳು ನಿಜಾನೇ ನುಡಿದಳು.
ವೇಣುಗೋಪಾಲಯ್ಯನ ಸಿಟ್ಟು ತಾರಕಕ್ಕೇರಿತ್ತು. ಛಟೀರ್ ಎಂದು ಕೆನ್ನೆಗೆ ಬಾರಿಸಿದಳು. ರುಕ್ಮಿಣಿ ಇದನ್ನು ನಿರೀಕ್ಷಿಸಿರಲಿಲ್ಲ. ಅಲ್ಲೇ ಕುಸಿದು ಕುಳಿತಳು.
ನಿಂಗೆ ಬೇರೆ ಯಾರು ಸಿಗಲಿಲ್ವಾ ಪ್ರೀತಿ ಮಾಡಕ್ಕೆ? ಮುಸ್ಲಿಂ ಆಗಬೇಕಿತ್ತಾ? ನೋಡ್ದೋರು ಎನಂದ್ಕೋತಾರೆ?
ಅಂದ್ರೆ ಮುಸ್ಲಿಂ ಅಲ್ಲದೇ ಬೇರೆ ಯಾರನ್ನೇ ಪ್ರೀತಿಸಿದ್ರೂ ನೀವು ಒಪ್ತಿದ್ದರಾ? ಅಂತ ಗಡುಸಾಗಿಯೇ ಕೇಳಿದಳು.
ವಿತಂಡ ವಾದ ಮಾಡಬೇಡ.
ನಿನ್ನನ್ನು ಸಾಯಿಸಿಬಿಡ್ತಾನೆ ಅವನು. ಹೋಗಿ ಹೋಗಿ ಮುಸ್ಲಿಂ ಜೊತೆ.. ಛೀ.. ಛೀ.. ಅವನನ್ನು ಮರೆತು ಮರ್ಯಾದೆ ಇಂದ ಇರೋದು ನೋಡು.
ಅವನ್ಯಾಕೆ ನನ್ನ ಸಾಯಿಸ್ತಾನೆ? ಅವನು ನನ್ನ ಪ್ರೀತಿಸ್ತಾನೆ ಅಪ್ಪ. ತುಂಬಾ ಒಳ್ಳೆಯ ಹುಡುಗ. ಎಲ್ಲಾ ಮುಸ್ಲಿಂ ರು ಕೆಟ್ಟವರಲ್ಲ. ಅಷ್ಟೆಲ್ಲಾ ಯಾಕೆ? ಇದೇ ಬೀದಿಯ ರಾಮಾಶಾಸ್ತ್ರಿ ತನ್ನ ಸೊಸೆಯನ್ನೆ ಸೀಮೆ ಎಣ್ಣೆ ಹಾಕಿ  ಸುಡಲಿಲ್ವಾ?
ಅದೆಲ್ಲಾ ಬೇಡ. ನೀನು ಅವನನ್ನ ಮರೆತುಬಿಡು. ಬೇರೆ ಗಂಡು ನೋಡ್ತೀವಿ. ಲೇ ಇವಳೇ, ನೀನಾದರೂ ಬುದ್ಧಿ ಹೇಳು. ಮಗ ನೋಡಿದರೆ ಹಂಗೆ; ಮಗಳು ಹಿಂಗೆ. ನೀನು ಬಂಜೆಯಾಗಿದ್ದರೆ ನಾನು ಖುಶಿ ಪಡ್ತಾ ಇದ್ದೆ.


ಲಕ್ಶಿದೇವಮ್ಮನಿಗೆ ಪಿಚ್ಚೆನಿಸಿತು. ಆಕೆ ಬುದ್ಧಿಹೇಳ ಹೋದರು. ರುಕ್ಮಿಣಿ ಎದ್ದು ಹೋಗಿ ರೂಮು ಸೇರಿಕೂಂಡಳು.
ರುಕ್ಮಿಣಿ ಕೋಪದಿಂದ ಕುದಿಯುತ್ತಿದ್ದಳು. ಅಲ್ಲಾ ನಾನು ಸಲೀಂನ ಇಷ್ಟ ಪಟ್ಟರೆ ಏನು? ಇನ್ನು ಆ ವಿಚಾರದಲ್ಲಿ ನಮ್ಮಿಬ್ಬರಿಲ್ಲೇ ಒಮ್ಮತವಿಲ್ಲ. ಹಾಗೊಂದು ವೇಳೆ ಮದುವೆ ಆಗಲೇ ಬೇಕಾದರೆ ಇನ್ನು ೩ ವರ್ಷ ಇಲ್ಲ ಅಂತ ಸಲೀಂ ಸ್ಪಷ್ಟ ಪಡಿಸಿದ್ದಾನೆ. ಓದೇ ಇನ್ನು ೧ ವರ್ಷ ಆಗುತ್ತೆ. ಆಮೇಲೆ ಕೆಲಸ ಅಂತ ಆಗಬೇಕು. ತದ ನಂತರ ಮದುವೆ. ಮೇಲಾಗಿ ನಮ್ಮ ಮನೆಗಳಲ್ಲಿ ಒಪ್ಪುತ್ತಾರೋ ಇಲ್ವೊ ಅನ್ನೋ ಭಯ ನಮ್ಮಿಬ್ಬರಿಗೂ ಇದೆ. ಅಪ್ಪ ನೋಡಿದರೆ ಈಗಲೇ ಬೈದಾಡುತಾ ಇದ್ದಾರೆ.ಪ್ರತಿ ದಿನ ದೇವರಿಗೆ ಪೂಜೆ ಮಾಡ್ತಾರೆ. ಆ ದೇವರು ಇದೇ ಏನು ಹೇಳಿರೋದು? ಜಾತಿ-ಧರ್ಮ-ದೇವರು ಮಾಡಿದ್ದಲ್ಲ. ನಾವೇ ನಮ್ಮ ಅನುಕೂಲಕ್ಕಾಗಿ ಮಾಡಿಕೂಂಡಿದ್ದು. ನಾವು ಖುಷಿಯಾಗಿ ಇರಲಾರವು ಅಂತಾದರೆ ಈ ಜಾತಿ ಯಾಕೆ?ಹೀಗೆ ಯೋಚಿಸುತ್ತಾ ಅವಳು ನಿದ್ರೆಗೆ ಜಾರಿದ್ದಳು. ರಾತ್ರಿ ಸುಮಾರು ೧ ಘಂಟೆ ಇರಬಹುದು. ಅವಳ ಮೊಬೈಲ್ ಗೆ ಒಂದು message ಬಂದಿತ್ತು. ಅದನ್ನು ಅವಳು ಆಗಲೇ ನೋಡಿದ್ದರೇ ಅವಳು ಮತ್ತೆ ನಿದ್ರಿಸುತ್ತಿರಲಿಲ್ಲ…. ಆದರೆ ಗಾಢ ನಿದ್ದೆಯಲ್ಲಿದ್ದವಳಿಗೆ ಅದು ಗೊತ್ತಾಗಲಿಲ್ಲ.


ಸಲೀಂ ಮೇಲೆ ಹಲ್ಲೆಯಾಗಿತ್ತು.! ಖುದ್ದು ಶ್ರೀಹರಿಯೇ ನಿಂತು ಹಲ್ಲೆ ನಡೆಸಿದ್ದ. ಅವನು ಸತ್ತ ಅಂತ ತಿಳಿದು ಶ್ರೀಹರಿ ಮತ್ತವನ ಜೊತೆಗಾರರು ಪರಾರಿಯಾಗಿದ್ದರು. ಆದರೆ, ಸಲೀಂ ಗಟ್ಟಿಮುಟ್ಟಾದ ಆಳು .ಇದಾದದ್ದು ರಾತ್ರಿ ಸುಮಾರು ೧೧.೩೦ ಘಂಟೆಗೆ.  ಕ್ಶೀಣವಾಗಿ ಉಸಿರಾಡುತ್ತಿದ್ದ ಸಲೀಂ ಅನ್ನು ರಾತ್ರಿ ಬೀಟಿನ ಪೋಲಿಸರು Victoria ಆಸ್ಪತ್ರೆಗೆ ದಾಖಲು ಮಾಡಿದ್ದರು. ತದ ನಂತರ ಮನೆಯವರಿಗೆ ವಿಷಯ ತಿಳಿಸಿದ್ದರು. ಆಸ್ಪತ್ರೆಗೆ ಬಂದ  ಸಲೀಂ ನ ತಮ್ಮ ರಿಜ್ವಾನ್ ರುಕ್ಮಿಣಿಗೆ message ಮಾಡಿದ್ದ, ಸಲೀಂ ಸೆಲ್ ಇಂದ. ಈ ಪ್ರಕರಣದ ಹಿಂದೆ ನಿಮ್ಮಣ್ಣನ ಕೈವಾಡವಿರಬಹುದು ಅಂತ ಸೂಕ್ಶ್ಮವಾಗಿ ಹೇಳಿದ್ದ.
ರುಕ್ಮಿಣಿ ಬೆಳಗ್ಗೆ ಎದ್ದಾಗ ವೇಣುಗೋಪಾಲಯ್ಯನವರ ಶ್ಲೋಕಗಳು ಕೇಳಿಸುತ್ತಿತ್ತು. ಅಪ್ಪ ನಸುಕಿಗೆ ಎದ್ದು ಪ್ರಾತಃವಿಧಿಗಳನ್ನು ಪೂರ್ತಿಗೊಳಿಸಿ, ಸ್ನಾನ ಮಾಡಿ ಪೂಜೆಗೆ ಕೂಡುತ್ತಿದ್ದ. ಲಕ್ಶಿದೇವಮ್ಮ ಕೂಡ ಅವರಿಗೆ ಸಹಾಯ ಮಾಡುತ್ತಿದ್ದರು. ಮುಂಚೆ ಶ್ರೀಹರಿ ಇರುತ್ತಿದ್ದ. ಈಗ ಅವನು ಮನೆಯಲ್ಲಿ ಇರೋದೇ ಅಪರೂಪ. ರುಕ್ಮಿಣಿ ಎದ್ದು ದಿನಂಪ್ರತಿಯಂತೆ ಸೆಲ್ ತೆಗೆದು ನೋಡಿದಳು. ಒಂದು message ಕಾಯುತ್ತಿತ್ತು.ಮುಖವರಳಿತು. Message ಓದಿದಾಗ ಆಘಾತವಾಯ್ತು. ಕಣ್ಣುಜ್ಜಿಕೊಂಡು ಮತ್ತೆ ಓದಿದಳು. ಹೌದು ನಿಜ, ಸಲೀಂ ಆಸ್ಪತ್ರೆಯಲ್ಲಿದ್ದಾನೆ. ಅದಕ್ಕೆ ಕಾರಣ ನಮ್ಮಣ್ಣ ಇರಬಹುದು. ಅವನಿಗೆ ಯಾರು ಹೇಳಿದ್ದು? ಅಪ್ಪ? ಅಥವಾ ಬೇರೆ ಯಾರಾದರೂ? ಒಂದು ಕ್ಶಣ ಗೊಂದಲವಾಯ್ತು. ತಕ್ಶಣ ಆಸ್ಪತ್ರೆಗೆ ಹೋಗೋಣ ಅನ್ನಿಸಿತು. ಆದರೆ ಹೊರಬರಲು ಕೂಡ ಧೈರ್ಯ ಸಾಲಲಿಲ್ಲ. ತಕ್ಶಣ phone ಮಾಡೋಣ ಅಂದುಕೊಂಡಳು.ಮಾಡಲಾಗಲಿಲ್ಲ.  ಬಹುಶಃ ಸಲೀಂ ಎತ್ತಲಾರ. ಅವರ ಮನೆಯವರು ಮಾತಾಡ ಬಹುದು. ಆದರೆ, ರಿಜ್ವಾನ್ ಹೇಳೋ ಪ್ರಕಾರ ನಮ್ಮಣ್ಣನೇ ಇದಕ್ಕೆಲ್ಲಾ ಕಾರಣ. ಹಾಗಾಗಿ ಅವರಿಗೆ ನನ್ನ ಮೇಲೆ ಕೋಪ ಬಂದಿರಲಿಕ್ಕೂ ಸಾಕು. ಪೋಲಿಸ್ ಕೇಸ್ ಆದರೆ ಏನು ಮಾಡೋದು ಅಂತ ಚಿಂತೆಗೊಳಗಾದಳು. ಆದರೆ, ಅವಳಿಗೆ ಗೊತ್ತಿಲ್ಲದ ವಿಷಯ ಅಂದ್ರೆ ಈಗಾಗಲೇ ಮಂಜ ಅನ್ನೋನು approver ಆಗಿದ್ದಾನೆ. ಆತ ಶ್ರೀಹರಿಯ ಸ್ನೇಹಿತ ಮತ್ತು ಈ ಎಲ್ಲಾ ಬೆಳವಣಿಗೆ ಕಾರಣ ದೇವಸ್ಥಾನದ ಅರ್ಚಕ ವೇಣುಗೋಪಾಲಯ್ಯ!! ಆದರೂ ಮನಸು ತಡೆಯಲಿಲ್ಲ. ಆಸ್ಪತ್ರೆಗೆ ಹೋಗೋಣ ಅಂತ ತಯಾರಾದಳು ರುಕ್ಮಿಣಿ.
ನಿಲ್ಲು!! ಕೂಗಿದರೂ ವೇಣುಗೋಪಾಲಯ್ಯ!
ಅಪ್ಪ, ನಾನು ಕಾಲೇಜಿಗೆ ಹೋಗಬೇಕು. ಇವತ್ತು practicles ಇದೆ.
ನಂಗೊತ್ತು ನೀನೆಲ್ಲಿಗೆ ಹೋಗ್ತಾ ಇದೀಯಾ ಅಂತ. Victoria ಆಸ್ಪತ್ರೆಗೆ ಆ ಸಾಬಿನಾ ನೋಡೋಕೆ ಅಲ್ವಾ?!
ರುಕ್ಮಿಣಿ ಸ್ತಂಭೀಭೂತಳಾದಳು. ಈ ವಿಷಯ ಅಪ್ಪನಿಗೆ ಹೇಗೆ ತಿಳಿಯಿತು? ಅಂದ್ರೆ ಇದಕ್ಕೇಲ್ಲಾ ಕಾರಣ ಅಪ್ಪ? ಅವಳಿಗೆ ನಂಬಲಾಗಲಿಲ್ಲ.
ಇನ್ನು ಮೇಲೆ ನೀನು ಅವನ  ಜೊತೆ ಇರಕೂಡದು. ಕೂಡು ನಿನ್ನ mobile. ಅವನನ್ನ ಮರೆತುಬಿಡು.
ಅಪ್ಪ ಎಂದು ಎನೋ ಹೇಳ ಹೋದಳು.
ಹೆಚ್ಚು ಮಾತು ಬೇಡ. ನಿಂಗೆ ಮದುವೆ ಮಾಡ್ತೀವಿ. ಸುಖವಾಗಿ ಇರ್ತೀಯ. ಅಲ್ಲೀ ತನಕ ಮನೆಯಲ್ಲೇ ಬಿದ್ದಿರು. ಈವತ್ತಿನಿಂದ ನೀನು ಕಾಲೇಜಿಗೆ ಹೋಗೋದು ಬೇಡ. ರುಕ್ಮಿಣಿಗೆ ಕಾಲ ಕೆಳಗಿನ ಭೂಮಿ ಬಾಯ್ತೆರದಂತಾಯ್ತು.


ಆ ಬ್ರಾಹ್ಮಣರ ಹುಡುಗಿ ಯಾರು? ಪಾಶಾ ಕೇಳಿದ್ದರು.
ರಿಜ್ವಾನ್ ಏನು ಗೊತ್ತಿಲ್ಲದವನ ತರಹ ನಿಂತಿದ್ದ.
ನೋಡು, ರಿಜ್ವಾನ್ ಇದು ನಮ್ಮ ಮಗನ ಜೀವನದ ಪ್ರಶ್ನೆ. ಇವರಿಬ್ಬರದೂ ಪ್ರೀತಿ-ಗೀತಿ ಅಂತೇನೂ ಇಲ್ಲವಲ್ಲಾ? ರಿಜ್ವಾನ್ ದು ದಿವ್ಯ ಮೌನ.
ಬದ್ಮಾಶ್….. ನಿಂಗೊತ್ತು. ಹೇಳು ಅಂತ ಕೆನ್ನೆಗೆ ಛಟೀರ್ ಅಂತ ಬಿತ್ತು ಏಟು. ಇಡೀ ಆಸ್ಪತ್ರೆಯಲ್ಲಿ ಅದು ಮಾರ್ದನಿಸಿತ್ತು. ರಿಜ್ವಾನ್ ಕುಸಿದು ಬಿದ್ದ.
ತಾಯಿಯಿಲ್ಲದ ತಬ್ಬಲಿಗಳು ಅಂತ ಇಬ್ಬರನ್ನೂ ಪ್ರೀತಿಯಿಂದ ನೋಡಿಕೂಂಡರೆ ಏನಿದು ನಿಮ್ಮ ಕೆಲಸ?
ಅಬ್ಬಾಜಾನ್, ರಿಜ್ವಾನ್ ಬಾಯಿಬಿಟ್ಟ. ಸಲೀಂ ಮತ್ತು ರುಕ್ಮಿಣಿ ತುಂಬಾ ಪ್ರೀತಿಸ್ತಾರೆ. ಆದರೆ, ಅವರಿಗೆ ಈ ಬಗ್ಗೆ ಗೊಂದಲವಿದೆ. ಹಿಂದೂ-ಮುಸ್ಲಿಂ ಪ್ರೀತಿಯನ್ನು ಈ ಸಮಾಜ- ನೀವು ಒಪ್ತೀರೋ ಇಲ್ವೋ ಅಂತ. ಬಹುಶಃ ಈ ಬಗ್ಗೆ ಅವರ ಮನೆಯಲ್ಲಿ ಚರ್ಚೆ ಆಗಿರಬಹುದು. ಅವರಿಗೆ ಇಷ್ಟವಾಗಿಲ್ಲ. ಈ ಹಲ್ಲೆ ನಡೆದಿದೆ. ಅದಾಗಿ ಒಬ್ಬ approver ಆಗಿದ್ದಾನೆ. ಆದರೆ ಅಬ್ಬಾಜಾನ್, ರುಕ್ಮಿಣಿ ತುಂಬಾ ಒಳ್ಳೆಯ ಹುಡುಗಿ. ನಿಧಾನವಾಗಿ ವಿವರಿಸಿದ ರಿಜ್ವಾನ್.
ಪಾಶಾ ಯೋಚನೆಗೆ ಬಿದ್ದರು. ಈ ಪರಿಸ್ಥಿತಿಯಲ್ಲಿ ಏನು ಮಾಡಬಹುದು? ಆ ಹುಡುಗಿ ಇಸ್ಲಾಂಗೆ ಮತಾಂತರಗೊಂಡರೆ? ಅವರೂ ಹೀಗೆ ಕೇಳಬಹುದು. ಇಷ್ಟಕ್ಕೂ ಸಲೀಂ ಇದಕ್ಕೆಲ್ಲಾ ಒಪ್ಪುತ್ತಾನಾ? ಚಿಕ್ಕಂದಿನಿಂದ ಜಾತಿ-ಧರ್ಮದ ಬಗ್ಗೆ ಸಲೀಂಗೆ ಅವನದೇ ಆದ ಅಭಿಪ್ರಾಯಗಳಿವೆ. ಎಷ್ಟೋ ಬಾರಿ ತಾವು ಅವನ ತರ್ಕಕ್ಕೆ ಒಪ್ಪಿದ್ದಾರೆ. ಹೀಗೆ ಸಾಗಿತ್ತು ಅವರ ವಿಚಾರಧಾರೆ.
ನೋಡು ರುಕ್ಮಿಣಿ, ಶ್ರೀಹರಿ ತುಂಬಾ ದಿನವಾದ ಮೇಲೆ ಅವಳ ಜೊತೆ ಮಾತಾಡಿದ್ದ. ಆ ಸಾಬಿ ಸಹವಾಸ ಬಿಡು. ಈಗಾಗಲೇ ಅವನ ಮೇಲೆ ಹಲ್ಲೆ ಆಗಿ ಅದು ಪೋಲಿಸ್ ತನಕ ಹೋಗಿ ನಮ್ಮ ಹುಡುಗ approver ಆಗಿದ್ದಾನೆ. ಅವನು ಮೇಲೆದ್ದು ಓಡಾಡಲು ಕನಿಷ್ಠ ಮೂರು ತಿಂಗಳಾದರೂ ಬೇಕು. ಇಷ್ಟಾದ ಮೇಲೆ ನೀನು ಅವನ್ನನ್ನೇ ಮದುವೆ ಆಗ್ತೀನಿ ಅಂತ ಅಂದ್ರೆ ಅವರು ನಿನ್ನ ಸಾಯಿಸಿಬಿಡ್ತಾರೆ.
ಅದಕ್ಕೆ ಕಾರಣ ನೀವು… ಚೂಪಾಗಿತ್ತು ದನಿ.
ನೋಡು, ಅರ್ಥ ಮಾಡ್ಕೋ. ಇತ್ತೀಚಿಗೆ ಈ ಮುಸ್ಲಿಂ ಹುಡುಗರ ದಂಧೆ ಇದು. ಚೆನ್ನಾಗಿರೋ ಹಿಂದೂ ಹುಡುಗೀರನ್ನ ಪ್ರೀತಿಸಿ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿ ನಂತರ ಆ ಹುಡುಗೀರನ್ನ ಸಾಯಿಸೋದು. ಅವನು ಇನ್ನ ಓದ್ತಾ ಇದ್ದಾನೆ. ಕೈಯಲ್ಲಿ ಕಾಸಿಲ್ಲ. ನಿನ್ನ maintain ಮಾಡಕ್ಕೆ ದುಡ್ಡು ಬೇಕು. ಅವನೊಬ್ಬ fraud.ಅವನ ಜೊತೆ ನೀನೇನು ಸುಖಪಡ್ತೀಯಾ?
ತಕ್ಶಣಕ್ಕೆ ಏನು ಹೇಳಬೇಕೆಂದು ರುಕ್ಮಿಣಿಗೆ ತೋಚಲಿಲ್ಲ.
ರುಕ್ಕು, ಶ್ರೀಹರಿ ಮುಂದುವರಿಸಿದ. ನೀನಿನ್ನ ಚಿಕ್ಕವಳು. ನೀನೇನು ಯೋಚನೆ ಮಾಡಬೇಡ. ನಿಂಗೆ ಬೇರೆ ಕಡೆ ಸಂಬಂಧ ನೋಡ್ತಾ ಇದೀವಿ. ಒಳ್ಳೆಯ ವರ ಸಿಕ್ಕ ತಕ್ಶಣ ನಿನ್ನ ಮದುವೆ. ಅಲ್ಲೀ ತನಕ ಸುಮ್ನೆ ಇರು. ಇದು ಮನೆ ಮರ್ಯಾದೆ ಪ್ರಶ್ನೆ.
ರುಕ್ಮಿಣಿಗೆ ಸಂಕಟ. ಈ ಸಂದಿಗ್ಧ ಪರಿಸ್ಥಿತಿ ಎದುರಿಸಲು ಧೈರ್ಯ ಕೂಡು ಕ್ರಿಷ್ಣ ಅಂತ ದೇವರ ಮೊರೆ ಹೊಕ್ಕಳು.
ಇದಾಗಿ ಒಂದು ವಾರದೊಳಗೆ ರುಕ್ಮಿಣಿಯ ಮದುವೆ ತರಾತುರಿಯಲ್ಲಿ ನಡೆದು ಹೋಯ್ತು. ಸಲೀಂ ಆಸ್ಪತ್ರೆಯಲ್ಲೇ ಇದ್ದ. ದೊಡ್ಡದೊಂದು ಭಾರ ಇಳಿದಂತೆ ವೇಣುಗೋಪಾಲಯ್ಯ ನಿಶ್ಚಿಂತರಾದರು. ಈ ಎಲ್ಲಾದರ ನಡುವೆ ರುಕ್ಮಿಣಿಯ ಕಣ್ಣೀರು ಯಾರಿಗೂ ಕಾಣಲಿಲ್ಲ.


ಮದುವೆಯಾಗಿ ಹೊಸದಾಗಿ ಬದುಕು ಪ್ರಾರಂಭಿಸಿದ ರುಕ್ಮಿಣಿ ಅದೊಂದು ದಿನ ಬೆಳಗ್ಗಿನ ಸುದ್ದಿ ನೋಡಿ ಮೂರ್ಛೆ ಹೋದಳು. ಆ ಸುದ್ದಿ ಹೀಗಿತ್ತು: ಉಗ್ರರ ಗುಂಪೊಂದು ಬೆಂಗಳೂರಿನ ದೇವಾಸ್ಥಾನಕ್ಕೆ ಬಾಂಬ್ ಇಟ್ಟು ಉಡಾಯಿಸಿದ್ದರು. ಈ ಘಟನೆಯಲ್ಲಿ ಸುಮಾರು ೧೫ ಮಂದಿ ಸ್ಥಳದಲ್ಲೇ ಅಸು ನೀಗಿದ್ದರು. ಸತ್ತವರ ಪಟ್ಟಿ ಹೀಗಿದೆ:
ಪ್ರಧಾನ ಅರ್ಚಕ ವೇಣುಗೋಪಾಲಯ್ಯ
ಮಮತಾ
ನೀರಜಾ
ರಮೇಶ್
………………..Sunday, November 01, 2009

First Talk

Hello

We do a lot of discussions, meetings and host of other things to do something, accomplish something. But what do we do to achieve them? Make it happen?? Most of us fail implementing.

The objective of this blog as is mentioned in the header: abhivyakti which means expression of emotions.