Thursday, December 31, 2009

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

ಲೇ:ಅನು
ಸಂ:ಅಭಿ

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

“ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ…….” ಪ್ರೇಮದ ಅನುಭವ ಇಲ್ಲದವರಿಗೂ ಈ ಅದ್ಭುತ ಲೋಕದ ಪ್ರಯಾಣ ಮಾಡಿಸುವ ಹಾಡು; ಆ ಪ್ರೇಮ ಸಮುದ್ರದ ದರ್ಶನ ಮಾಡಿಸುವ ಆ ದನಿ ನೀಲಾಕಾಶ ಮೀರಿ ಅನುರಣಿಸುತ್ತಲೇ ಇರುತ್ತದೆ. “ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ……” ದೇವ ಮಂದಿರದಂತೆ ಪ್ರೀತಿಯಿಂದ ಪುನೀತವಾಗಿದೆ ಮನಸಿನೊಳಗೂ. ಎಷ್ಟು ಸಹಜ ದನಿಯಲ್ಲಿ ಹೇಳಿ ಬಿಡುತ್ತಾರೆ.


ದೂರದ ಊರಿನಲ್ಲೇ ಉಳಿದ ಪತಿಯ ನೆನಪಿನಲ್ಲಿ, ತವರ ಸಂಭ್ರಮದಲ್ಲಿ ಇದ್ದೂ ಇರಲಾರದ ತುಮುಲದ ಚಿತ್ರ “ಬಳೆಗಾರ ಚೆನ್ನಯ್ಯ” ನದು. ಮಾಂತ್ರಿಕ ಧ್ವನಿಯಲ್ಲಿ “ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು” ಎಂದು ಘಟ್ಟಿಸಿ ಕೇಳಿದಾಗ ಯಾವ ಪತಿರಾಯನಿಗೂ ಕೋಪ ಅಳಿದು ಹೋಗಬೇಕು.


ಏನೆಲ್ಲಾ ಕಷ್ಟ-ಕೋಟಲೆ ಇದ್ದರೂನೂ ಸೂರ್ಯ ಹುಟ್ಟಿ ಬರುವ ಭರವಸೆ ನಮಗಿತ್ತು. “ಕೋಡಗನ ಕೋಳಿ ನುಂಗಿತ್ತಾ….” “ತರವಲ್ಲ ತಗಿ ನಿನ್ನ ತಂಬೂರಿ…” “ಸೋರುತಿಹುದು ಮನೆಯ ಮಾಳಿಗೆ…” ಎನ್ನುತ್ತಾ ತತ್ವಗಳನ್ನು ಕೇಳಿಸುತ್ತಿದ್ದ ಅಮೋಘ ಧ್ವನಿ ನಿತ್ಯ ನೂತನ- ನಿತ್ಯ ನಿರಂತರ ಎಂದು ನೆಮ್ಮದಿಯಲ್ಲೇ ಇದ್ದು ಬಿಟ್ಟವಲ್ಲ? ಆ ಧ್ವನಿ ಮುಂದೊಮ್ಮೆ ನೀರವವಾಗಬಹುದೆಂಬ ಯೋಚನೆಯೂ ಇಲ್ಲದಂತೆ.


“ಬಾ ಇಲ್ಲಿ ಸಂಭವಿಸು!” ಎಂತಹ ಹಾಡು!! ಎಂತಹ ಬೇಡಿಕೆ….. ಸಿ. ಅಶ್ವತ್ಥ್ ಮತ್ತೆ ಮತ್ತೆ ಇಲ್ಲಿ ಆವಿರ್ಭಾವಿಸಬೇಕು. ತುಂಬು ಜೀವನ ನಡೆಸಿದ ಆ ಚೇತನದ ಸ್ವರ ಗಂಗೆ ನಮ್ಮ ಮನ-ಮನೆಗಳನ್ನು ಆರ್ದ್ರವಾಗಿಸಬೇಕು.


Saturday, December 19, 2009

ಚಿತ್ರ ವಿಮರ್ಶೆ: ಕಳ್ಳರ ಸಂತೆ

ಚಿತ್ರ ವಿಮರ್ಶೆ: ಕಳ್ಳರ ಸಂತೆ

ಈ ವಾರ ತೆರೆಕಂಡಿರುವ ಅಗ್ನಿಶ್ರೀಧರ್ ರವರ ’ ಕಳ್ಳರ ಸಂತೆ’ ಅದು ಹುಟ್ಟು ಹಾಕಿದ ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಸಿ ಮಾಡಿವೆ. ಮೊದಲೆರಡು ಚಿತ್ರಗಳಲ್ಲಿದ್ದ ಮೊನಚು ಕಳೆದು ಹೋಗಿದೆ. ’ಆ ದಿನಗಳು’ ಮತ್ತು ’ಸ್ಲಂ ಬಾಲ’ ಚಿತ್ರಗಳು ನೈಜ ಘಟನೆಗಳ ಆಧಾರಿತ ಕೃತಿಗಳು. ಆದರೆ ’ ಕಳ್ಳರ ಸಂತೆ’ ಯಲ್ಲಿ ನೈಜತೆ ಮಾಯವಾಗಿ ಕಾಲ್ಪನಿಕ ಚಿತ್ರವಾಗಿ ಹಾಸ್ಯಾಸ್ಪದವಾಗಿದೆ.


   ಚಿತ್ರದ ಆರಂಭದ ದೃಶ್ಯದಲ್ಲಿ ನಮ್ಮ ನಾಯಕನನ್ನು ಪೋಲಿಸರು chase ಮಾಡುತ್ತಾರೆ. ಆತ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ. ಈ ನಡುವೆ ಒಬ್ಬ ದಾರಿಹೋಕ ಟಿವಿ ಚಾನೆಲ್ ಒಂದಕ್ಕೆ ಸುದ್ದಿ ಕೊಡುತ್ತಾನೆ. ತದ ನಂತರ flashbackನಲ್ಲಿ ಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ನಮ್ಮ ನಾಯಕ ಕನ್ನಡ ಪದವೀಧರ. ಕೆಲಸ ಸಿಗೋದಿಲ್ಲ. ಸರ್ಕಾರಿ ನೌಕರಿಯಲ್ಲಿ “ಲಂಚಾವತಾರ” ದ ದರ್ಶನವಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳು  ಕ್ಯಾರೆ ಅನ್ನುವುದಿಲ್ಲ .  ಆತ ಒಂದು ಸಣ್ಣ ಕ್ಯಾಂಟೀನ್ ಪ್ರಾರಂಭಿಸುತ್ತಾನೆ ಲೋಕಲ್ ಎಮ್ ಎಲ್ ಎ ಇಂದ ಕಿರುಕಳ ಅನುಭವಿಸುತ್ತಾನೆ.ಕ್ಯಾಂಟೀನ್ ಸುಟ್ಟುಹೋಗುತ್ತದೆ.ಕೊನೆಗೆ ಅವನು ಕಳ್ಳತನಕ್ಕೆ ಇಳಿಯುತ್ತಾನೆ.ಇವನಲ್ಲಿ ಸೂಕ್ಷ್ಮ ಸಂವೇದನೆಯನ್ನು ಹುಡುಕಿ ಆರೋಪಿಸಿದ್ದಾರೆ ನಿರ್ದೇಶಕರು.   ಇಂತಹ ಸೂಕ್ಷ್ಮ ಸಂವೇದನೆಯು ನಮ್ಮ ಘನ ಸರ್ಕಾರವನ್ನು ಉರುಳಿಸುವುದರಲ್ಲಿ ಸಫಲವಾಗುತ್ತದೆ?? 
      ಇಲ್ಲಿನ ಪ್ರಸಂಗಗಳು ಹಾಸ್ಯಾಸ್ಪದವಾಗಿದೆ. ಕೋಟ್ಯಾಂತರ ರೂಪಾಯಿಗಳ ಏರುಪೇರಿನಿಂದಲೇ ಸರ್ಕಾರ ಉರುಳಿಸಲು  ಸಾಧ್ಯವಿಲ್ಲ ಆದರೂ ನಮ್ಮ ಸೂಕ್ಷ್ಮ  ಸಂವೇದನೆಯ ನಾಯಕ  ಅದರಲ್ಲಿ ಯಶಸ್ವಿ! ! 
        ಇಲ್ಲಿ ಪ್ರಸ್ತುತ ವಿದ್ಯಮಾನಗಳನ್ನೆಲ್ಲ ಒಂದೇ ಕಡೆ ತೋರಿಸುವ ಪ್ರಯತ್ನವಾಗಿದೆ . ಅದರಲ್ಲಿ ಶ್ರೀಧರ್ ಎಡವಿದ್ದಾರೆ. ಕನ್ನಡ ಭಾಷಾಪ್ರೇಮ   ಅತಿಯಾಗಿದೆ.  ಕನ್ನಡ ಮಾತನಾಡುವುದರಿಂದ  ಅಸ್ತಮಾ ಕಾಯಿಲೆ ಗುಣವಾಗುತ್ತದೆ  ಎನ್ನುವ ಠರಾವಿನ ತನಕ.  ಹಾಗಿದ್ದರೆ ಕನ್ನಡಿಗರಿಗೆ ಯಾರಿಗೂ ಅಸ್ತಮಾ ಇರಲೇಬಾರದಿತ್ತಲ್ಲವೆ…..
          ಎಲ್ಲ ಬುದ್ದಿಜೀವಿಗಳ , ರಾಜಕಾರಣಿಗಳ ಗೋಸುಂಬೆ ಬಣ್ಣ ಬಯಲು ಮಾಡುತ್ತಾ  ಆವೇಶದಲ್ಲಿ ಹಾಸ್ಯಾಸ್ಪದ ದೃಶ್ಯ ಸಂಯೋಜನೆಯಿಂದ ಚಿತ್ರ ನೀಟಾಗಿ   ಎಡವುತ್ತದೆ.  ನಾಯಕ ಯಶ್ ,ನಾಯಕಿ ಹರಿಪ್ರಿಯಾ ಚೆನ್ನಾಗಿ ಅಭಿನಯಿಸಿದ್ದಾರೆ   ಮುಂದೆ ಭರವಸೆಯ ಕಲಾವಿದರಾಗುತ್ತಾರೆಂದು  ಸಂತೋಷ ಪಡೋಣ. ರಂಗಾಯಣ ರಘು ತಮ್ಮ ಎಂದಿನ ಶೈಲಿಯಲ್ಲಿ ಪಾತ್ರಕ್ಕೆ ಜೀವ ತುಂಬುತ್ತಾರೆ. ಮುಖ್ಯಮಂತ್ರಿಯಾಗಿ ಏಕಕಾಲದಲ್ಲಿ  ನಮ್ಮ ಮಾಜಿ ಮುಖ್ಯಮಂತ್ರಿಗಳನ್ನು, ಹಾಲಿ  ಮುಖ್ಯಮಂತ್ರಿಗಳನ್ನು ನೆನೆಪಿಸುತ್ತಾರೆ. ವಿ.ಮನೋಹರ್ ಸಂಗೀತ ಓಕೆ. ಸುಂದರ್ ನಾಥ ಸುವರ್ಣರ ಛಾಯಾಗ್ರಹಣ ಕಣ್ ಸೆಳೆಯುತ್ತದೆ.


ಕೊನೆಯದಾಗಿ, ನಿಮಗೆ time ಜಾಸ್ತಿ ಇದ್ದು, ಮಾಡಲು ಕೆಲಸವಿಲ್ಲದ್ದಿದ್ದಲ್ಲಿ ಈ ಚಿತ್ರ ನೋಡಬಹುದು.

Wednesday, December 09, 2009

Guna Mukhi

ಗುಣಮುಖಿ


ಈ ಹೊತ್ತಿಗೆಯ ಹೆಸರೇ ಮಾರ್ಮಿಕವಾಗಿದೆ. ಗುಣಮುಖಿ ಎಂದಾಕ್ಷಣ ನಮಗೆ ರೋಗಿಗಳ ನೆನಪಾಗುತ್ತದೆ. ಅವರು ಗುಣಮುಖರಾಗಲಿ ಎಂದೇ ಆಶಿಸುತ್ತೇವೆ. ಅದು ಸಹಜವೂ ಹೌದು. ಹಾಗೆಯೇ, ನಾವೆಲ್ಲಾ ಮಾನಸಿಕವಾಗಿ ಆರೋಗ್ಯವಂತರ? ಎಂದು ನಮ್ಮನ್ನೇ ಕೇಳಿಕೂಳ್ಳುವಂತಾಗಿದೆ. ಇವತ್ತಿನ ಈ ಸಂಕೀರ್ಣ ಬದುಕಿನಲ್ಲಿ ಜೀವನ ಮೌಲ್ಯಗಳು ಮತ್ತು ಅದರ ಅಳವಡಿಕೆ ಹುಡುಕಿದರೂ ಕಾಣ ಸಿಗದು.

ಇದೊಂದು ಕಥಾ ಗುಚ್ಛ. ಇಲ್ಲಿರುವ ಕಥೆಗಳಲ್ಲಿ ಜೀವನ ಪ್ರೀತಿ ಇದೆ. ಮೌಲ್ಯಗಳಿವೆ. ಹಾಗೆಯೇ, ಜೀವನ ಪಾಠವೂ ಇದೆ. ಕತ್ತಲಿಂದ ಬೆಳಕಿನೆಡೆಗೆ ದಾರಿ ದೀಪವಿದೆ. ಯೋಜಕರ ಮಾತಿನಲ್ಲೇ ಹೇಳುವುದಾದರೆ,

“ಕ್ಯಾನ್ಸರ್ ಮೊದಲಾದ ಮರಣಾಂತಿಕ ರೋಗಗಳಿಗೆ ತುತ್ತಾಗಿ ಸಾವಿನ ದಿನಗಳನ್ನುದುಃಖದಿಂದ ದೂಡುತ್ತಿರುವವರ ಹಾಗೂ ಸಣ್ಣ-ಸಣ್ಣ ತೊಂದರೆಗಳಿಗೂ ಹೆದರಿ ಇನ್ನು ಬದುಕೆಲ್ಲ ಕತ್ತಲಾಯಿತು ಎಂದು ಹತಾಶೆಗೊಂಡವರ ಆತ್ಮವಿಶ್ವಾಸವನ್ನು ತುಂಬುವ ಮತ್ತು ಸಾಂತ್ವಾನದ ಮಾತುಗಳಿಂದ ನಗುವನ್ನು ಚಿಮ್ಮಿಸಿ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲುವ ಕಥೆಗಳು ಇಲ್ಲಿವೆ. ಈ ಕಾರಣಕ್ಕಾಗಿ ’ಗುಣಮುಖಿ’ ಯನ್ನು ವಿಶೇಷವಾಗಿ ಕರ್ನಾಟಕದಲ್ಲಿರುವ ಸಾವಿರಾರು ಆಸ್ಪತ್ರೆಗಳಲ್ಲಿನ ಲಕ್ಷಾಂತರ ರೋಗಿಗಳಿಗೆ ಉಚಿತವಾಗಿ ಮುಟ್ಟಿಸಬೇಕೆಂಬ ಆಶಯ ನನ್ನದು”.

ಇವು ಕೇವಲ ರೋಗಿಗಳಿಗೆ ಮಾತ್ರವಲ್ಲದೇ ಸಣ್ಣ ಸೋಲಿಗೂ ಹೆದರಿ ಆತ್ಮಹತ್ಯೆಯಂತಹ ಅನಾಹುತ ಮಾಡಿಕೊಳ್ಳುವ ಯುವಜನಾಂಗಕ್ಕೆ ಒಂದು ದೀವಿಗೆ. ಈ ಕಥೆಗಳು ಚೈತನ್ಯದಾಯಕ. ಪ್ರತಿಯೊಬ್ಬರು ವಯಸ್ಸಿನ-ಜಾತಿಯ ಭೇದ ಮರೆತು ಓದಲೇಬೇಕಾದ ಕೃತಿ ಇದು.

ಹಾಗೆಯೇ, ಯೋಜಕರಿಗೆ ಇದನ್ನು ಉಚಿತವಾಗಿ ರೋಗಿಗಳಿಗೆ ತಲುಪಿಸುವ ಗುರಿ ಇದೆ. ಇದನ್ನು ಓದಿದ ಯಾವುದೇ ವೈದ್ಯಾಧಿಕಾರಿ, ವೈದ್ಯ, ಆಸ್ಪತ್ರೆ ಸಿಬ್ಬಂದಿ ಅವರನ್ನು ಭೇಟಿ ಮಾಡಿ ಈ ಪುಸ್ತಕ ಎಲ್ಲರಿಗೂ ತಲುಪುವಂತೆ ಮಾಡಲು ನನ್ನದೊಂದು ನಮ್ರ ವಿನಂತಿ.

ಈ ಕಿರು ಹೊತ್ತಿಗೆಯ ಒಂದು ಪ್ರಸಂಗ:

ಸಾಧು ಜೆ.ಪಿ. ವಾಸ್ವಾನಿ ಹೇಳಿದ ಕಥೆ ಇದು. ಪಿಶಾಚಿಯೊಂದು(ಸೈತಾನ) ತನ್ನ ನೌಕರಿಯನ್ನು ನಿಲ್ಲಿಸಲು ನಿರ್ಧರಿಸಿತು. ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ತಾನು ಧೀರ್ಘಕಾಲ ಉಪಯೋಗಿಸಿದ ಉಪಕರಣಗಳನ್ನು ಅಗ್ಗದ ಬೆಲೆಗೆ ಬಿಕರಿ ಮಾಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತು.

ಗಿರಾಕಿಗಳನ್ನು ಆಕರ್ಷಿಸುವ ಸಲುವಾಗಿ ಪಿಶಾಚಿಯ ಮನೆಯಂಗಳದಲ್ಲಿ ಉಪಕರಣಗಳನ್ನೆಲ್ಲ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇಂದ್ರಿಯಾಸಕ್ತಿ, ಸ್ವಾರ್ಥ, ಮಿಥ್ಯಾ ಪ್ರತಿಷ್ಠೆ, ಜಂಭ, ಹೊಟ್ಟೆಕಿಚ್ಚು, ವೈರ, ಕೋಪ, ದುರಾಶೆ, ಜಿಪುಣತನ, ಅಧಿಕಾರದಾಹ, ಕೀರ್ತಿ, ಕಾಮನೆ ಮುಂತಾದವುಗಳು ಬಲುಬೇಗನೆ ಮಾರಾಟವಾದವು. ಏಕೆಂದರೆ ಇವುಗಳ ಬೆಲೆ ತುಂಬ ಅಗ್ಗವಾಗಿತ್ತು ಮತ್ತು ಗಿರಾಕಿಗಳು ಬಹಳ ಬೇಗ ಬಂದು ವ್ಯವಹಾರ ಕುದುರಿಸಿ ಕೊಂಡರು.

ಆದರೆ ಸ್ವಲ್ಪ ತಡವಾಗಿ ಬಂದವರಿಗೆ ಕಾಣಸಿಕ್ಕಿದ್ದು ಎರಡೇ ಉಪಕರಣಗಳು. ಇವುಗಳಿಗೆ ಅಂಟಿಸಿದ ಬೆಲೆಗಳ ಚೀಟಿಗಳನ್ನು ನೋಡಿದವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಕ್ರಯ ಬಹಳ ದುಬಾರಿಯಾಗಿತ್ತು. ನಿರಾಶೆ ಮತ್ತು ಖಿನ್ನತೆಗಳೇ ಈ ಉಪಕರಣಗಳು.
ಗಿರಾಕಿಯೊಬ್ಬ ಪ್ರಶ್ನೆ ಮಾಡಿದ- “ಅದೇಕೆ ಈ ಉಪಕರಣಗಳಿಗೆ ಇಷ್ಟು ಬೆಲೆ? ಉಳಿದವನ್ನೆಲ್ಲ ಕೈಗೆಟಕುವ ಕ್ರಯಕ್ಕೆ ಮಾರಿದೆಯಲ್ಲ?”
“ಇವು ತುಂಬಾ ಶಕ್ತಿಶಾಲಿ ಉಪಕರಣಗಳು. ಉಳೀದೆಲ್ಲ ಸಲಕರಣೆಗಳು ಸೋತಾಗ ಮಾತ್ರ ನಾನು ಇವನ್ನು ಉಪಯೋಗಿಸುತ್ತಿದ್ದೆ. ಆದ್ದರಿಂದಲೇ ಇವು ಹೆಚ್ಚು ಸವೆದಿಲ್ಲ. ಮನುಷ್ಯನನ್ನು ನಿರಾಶೆಗೊಳಿಸಿದರೆ ಅವನು ಖಿನ್ನನಾಗುತ್ತಾನೆ. ಆಗ ಅವನು ಜೀವನದಲ್ಲಿ ಸೋಲುತ್ತಾನೆ” ಎಂದು ಪಿಶಾಚಿ ವಿವರಿಸಿತು.

ಖಿನ್ನತೆ ಮತ್ತು ಅದಕ್ಕೆ ಕಾರಣವಾದ ನಿರಾಶೆ ಎಂದಿಗೂ ಒಳ್ಳೆಯದಲ್ಲವೆಂದು ಈ ದೃಷ್ಠಾಂತ ಕಥೆಯು ಸಾರುತ್ತದೆ.

ಲೇಖಕರು: ಪ್ರೊ.ವಿ.ಬಿ.ಅರ್ತಿಕಜೆ
ಯೋಜನೆ: ಗೋವರ್ಧನ್ ಅಂಕೋಲೆಕರ್(93410-80609)

ಪ್ರಕಾಶಕರು: ವಿಶ್ವವ್ಯಾಪಿ ಗಣೇಶ ಪ್ರಕಾಶನ, ಸಾಗರ-577401

Tuesday, December 08, 2009

ಗುರುವೇ ನಮನ


ಲೇ: ಅನು
ಸಂ: ಅಭಿ

ಗುರುವೇ ನಮನ

ಜ್ಞಾನಸಾಗರದೊಳಗೆ ಗುರುವೋ,
ಜ್ಞಾನಿ ಗುರುವಿನರಿವೇ ಸಾಗರವೋ,
ಸಾಗರ ಸಮ್ಮುಖವೆ ಸಂಯೋಗವೋ
        ಗೀತ ಮಾತಿನ ಒಳಗೋ
        ಮಾತು ಗೀತದ ಒಳಗೋ
        ಮಾತು ಗೀತಗಳೆರಡೂ ಮಾಧುರ್ಯದೊಳಗೋ
ಮಧು ಗಾನದೋಳಗೋ
ಗಾನ ಮಧುವಿನ ಒಳಗೋ
ಗಾನಮಧುರಭಾವವೇ ವಾದನವೋ
        ನಾದ ವಾದ್ಯದ ಒಳಗೋ
        ವಾದ್ಯ ನಾದ ಒಳಗೋ
        ನಾದ ವಾದ್ಯಗಳೆರಡೂ ಬೆರಳ ಫಲಿಲೊಳಗೋ
ಅರಿವು ಬೆರಳ ನಡೆಯೋ
ಬೆರಳ ನಡೆಯೇ ಅರಿವಿನಳವೋ
ವಾದವಾದ್ಯ ಜ್ಞಾನವೆಲ್ಲ ಕೃತಿಯ ಬೆರಗೋ

        ಕೃತಿಧಾರೆ ಗುರುವೋ
        ಗುರುವೆ ಕೃತಿಧಾರೆಯೋ
        ಗುರು-ಕೃತಿ ಸಮ್ಮುಖವೆ ಸುಕೃತವೋ.....
                                        ಗುರುವೇ ನಮನ

ಧ್ವನಿ


ಲೇ: ಅನು
ಸಂ: ಅಭಿ

    ಧ್ವನಿ

ನಾವಿದ್ದೇವೆ ಕತ್ತಲ ಕೂಪದೊಳಗೆ
ಸದ್ದು ಗದ್ದಲದ ಸಂತೆಯೊಳಗೆ
ಇಲ್ಲಿದೆ ಬೇಕಾದ್ದು, ಬೇಡಾದ್ದು
ಸರಕುಸರಂಜಾಮು ಸುಮಾರಾದ್ದು

ಸದ್ದಿಲ್ಲದ ತಾವು ಮಾತ್ರ ಇಲ್ಲಿಲ್ಲ
ಅನತಿ ದೂರದ ಇನಿದನಿ ಕೇಳುವುದಿಲ್ಲ

ಇದು ಚಕ್ರವ್ಯುಹ ಒಳಬರುವ ದಾರಿ ನೂರಾರು    
ದಾಟಿ ಬರಲು ಅಡ್ಡಿ-ಆತಂಕ, ಅಜ್ಞಾನ ನೂರು   

ಬಾಗಿಲು ಮುಚ್ಚಿದೆ, ಕಿಟಿಕಿ ಬಿಗಿದಿದೆ
ಗದ್ದಲದ, ಕತ್ತಲಲಿ ದಿಶೆತೋರದಿದೆ
ಬೆಳಕಿನೊಂದು ಕಿರಣಕೆ
ಕಣ್ತೆರೆಯ ಬೇಕಿದೆ ನಾವು ಅಂತರಾಳದ ಅಂತಃಸ್ವತ್ವದ ದನಿಯ
ಕೇಳಬೇಕಿದೆ ನಾವು, ಇಂದು; ಎಂದೆಂದೂ.......

Friday, December 04, 2009

Kannada Film Industry:: Crisis

ಕನ್ನಡ ಚಿತ್ರರಂಗ: ಅವಸಾನದ ಹಾದಿಯಲ್ಲಿ

ಇತ್ತೀಚಿಗೆ ಕನ್ನಡ ಚಿತ್ರರಂಗದ ’ಗಣ್ಯರು’ ಸಭೆ ಸೇರಿ ಕ್ರಿಯಾಸಮಿತಿ ರಚಿಸಿ ಚಿತ್ರದ ಗುಣಮಟ್ಟ ಹೆಚ್ಚಿಸಲು ಮತ್ತು ಚಿತ್ರರಂಗವನ್ನು ’ಮೇಲೆತ್ತಲು’ ಅನೇಕಾನೇಕ ನಿರ್ಧಾರಗಳನ್ನು ಪ್ರಕಟಿಸಿದೆ.

ಒಂದು ಚಿತ್ರ ಕೇವಲ 45 ದಿನಗಳಲ್ಲಿ ಶೂಟಿಂಗ್ ಮುಗಿಸಬೇಕೆಂಬ ನಿರ್ಧಾರವಿದೆಯಲ್ಲಾ? ಅದನ್ನು ಕ್ರಿಯಾಸಮಿತಿ ನಿರ್ಧರಿಸಲು ಸಾಧ್ಯವೇ? ಒಂದು ಚಿತ್ರದ ಶೂಟಿಂಗ್, ಪೋಸ್ಟ್-ಪ್ರೊಡಕ್ಷನ್ ಕೆಲಸಕ್ಕೆ ಇತಿ-ಮಿತಿ ಇಲ್ಲ. ಇರಕೂಡದು. ಅದನ್ನು ನಿರ್ಧಾರಿಸುವುದು ಚಿತ್ರಕತೆ ಮತ್ತು ನಿರ್ದೇಶಕ ಮಾತ್ರ. ಈ ರೀತಿಯ ಒತ್ತಡ ಹೇರುವ ಮೂಲಕ ಆತನ ಕ್ರಿಯಾಶೀಲತೆಗೆ ಕಡಿವಾಣ ಹಾಕಿದಂತೆ. ಎಲ್ಲೊ ದಿನೇಶ್ ಬಾಬು ತರದವರು 10-12 ದಿನಗಳಲ್ಲಿ ಚಿತ್ರ ಮುಗಿಸುತ್ತಾರೆ. ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹಾಗೆ ನೋಡಿದರೆ ದೃಶ್ಯ ಮಾಧ್ಯಮ ಕೇವಲ ನಿರ್ದೇಶಕರ ಮಾಧ್ಯಮ. ಆತನ ಮೇಲೆ ಈ ಪರಿ ನಿರ್ಬಂಧ ಹೇರೋದು ಯಾವ ನ್ಯಾಯ?

ಚಿತ್ರ ನಿರ್ಮಾಣಕ್ಕೆ ನಿರ್ದೇಶಕ ಎಷ್ಟು  ಮುಖ್ಯಾನೋ ಅಷ್ಟೇ ಮುಖ್ಯ ನಿರ್ಮಾಪಕ. ಯಾವುದೋ ಹುಚ್ಚು ಆವೇಶದಲ್ಲಿ ಅತಿಯಾದ ದುರಾಸೆಯಿಂದ ಚಿತ್ರ ನಿರ್ಮಾಣಕ್ಕೆ ಇಳಿಯುವ ನಿರ್ಮಾಪಕರು ಸರಿಯಾದ ನಿರ್ದೇಶಕರನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಆ ವೈಫಲ್ಯವನ್ನು ನಿರ್ದೇಶಕರ ಮೇಲೆ ಗೂಬೆ ಕೂರಿಸುವ ಮೂಲಕ ಸಮಾಧಾನ ಪಟ್ಟಿದ್ದಾರೆ.

2009 ಇಸವಿಯಲ್ಲಿ ಬಿಡುಗಡೆಯಾದ ಚಿತ್ರಗಳು 109. ಅದರಲ್ಲಿ ಯಶಸ್ವಿ ಅನಿಸಿಕೂಂಡದ್ದು ಬೆರಳೆಣಿಕೆಯಷ್ಟು ಮಾತ್ರ.ಈ ಸಂದರ್ಭದಲ್ಲಿ ಗುಣಮಟ್ಟ ಕುಸಿದಿದೆ ಅನ್ನುವುದು ವಿಧಿತ. ಅದಕ್ಕೆ ಕಾರಣ ಹುಡುಕಿದರೆ ಸಿಗುವ ಉತ್ತರ ನಿರ್ಮಾಪಕನ ದುರಸೆ ಮತ್ತು ನಿರ್ದೇಶಕನ ವೈಫಲ್ಯ. ಹಾಗಾದರೆ, ನಿರ್ದೇಶಕನಿಗೆ ಅನುಭವ ಇರಲೇಬೇಕು ಮತ್ತು ಆತ ಕನಿಷ್ಠ ೫ ಚಿತ್ರಗಳಿಗಾದರೂ ಸಹಾಯಕನಾಗಿ ದುಡಿದಿರಬೇಕು ಅನ್ನೋ ವಾದಕ್ಕೆ ಪುಷ್ಠಿ ದೂರೆಯುತ್ತದಾ? ಖಂಡಿತ ಇಲ್ಲ. ಅಪ್ಪಟ ಕ್ರಿಯಾಶೀಲ ಮಾಧ್ಯಮವಾದ ದೃಶ್ಯ ಮಾಧ್ಯಮವನ್ನು ಹೇಗೆ ಬಳಸಬೇಕು, ತನ್ನ ನಿಲುವನ್ನು ಹೇಗೆ ಪ್ರೆಸೆಂಟ್ ಮಾಡಬೇಕು ಗೊತ್ತಿಲ್ಲದ ನಿರ್ದೇಶಕರು ಚಿತ್ರವನ್ನು ಕೆಡಿಸುತ್ತಾರೆ. ಈ ವರ್ಷದಲ್ಲಿ ಬಿಡುಗಡೆಯಾದ ಚಿತ್ರಗಳು ತಾಂತ್ರಿಕವಾಗಿ ಉತ್ತಮವಾಗಿ ಮೂಡಿ ಬಂದಿದೆ. ಅದ್ಭುತವೆನಿಸುವಂತಹ ಸಂಗೀತವಿದೆ, ಸಾಹಿತ್ಯವಿದೆ. ಛಾಯಾಗ್ರಹಣವಿದೆ. ಆದರೆ ಅದನ್ನೆಲ್ಲಾ ಬಳಸುವಲ್ಲಿನಿರ್ದೇಶಕ ಎಡವಿದ್ದಾನೆ. ಚಿತ್ರ ಮಕಾಡೆ ಮಲಗಿದೆ. ಪ್ರೇಕ್ಷಕ ಥಿಯೇಟರ್ ಕಡೆ ತಲೆ ಹಾಕಿ ಮಲಗೋದಿಲ್ಲ.

ಈ ಸಾಲಿನಲ್ಲಿ ಬಿಡುಗಡೆಯಾದ ಯಾವೂಂದು ಚಿತ್ರವೂ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗಿಲ್ಲ. ದೊಡ್ಡ-ದೊಡ್ಡ ಬ್ಯಾನರ್ ಗಳ ಚಿತ್ರಗಳು ಪ್ರೇಕ್ಷಕನ ನಿರೀಕ್ಷೆಯನ್ನು ಹುಸಿ ಮಾಡಿವೆ. ಅದಕ್ಕೆ ಕಾರಣ ಗುಣಮಟ್ಟ. ಜನರಿಗೆ ಇಷ್ಟವಾಗುವಂತಹ ಮೌಲ್ಯಧಾರಿತ ಚಿತ್ರಗಳೆಲ್ಲಿ ಬಂದಿವೆ? ಅದೇ ಹಳೆಯ ಸಿದ್ಧ ಸೂತ್ರಗಳನ್ನಿಟ್ಟುಕೂಂಡು ಚಿತ್ರ ಮಾಡಿದರೆ ಯಾವ ಪ್ರೇಕ್ಷಕ ಬರುತ್ತಾನೆ?? ಅವನ ತಾಳ್ಮೆಗೂ ಒಂದು ಮಿತಿ ಇದೆ. ಒಂದೇ ಕತೆ ಇರುವ ಎಷ್ಟು ಚಿತ್ರಗಳನ್ನು ನೋಡಬಲ್ಲ?? ಅಂಬಾರಿ- ಅಮೃತಧಾರೆ; ವೀರ ಮದಕರಿ- ಕಿರಣ್ ಬೇಡಿ , ಹೀಗೆ ತುಂಬಾ ಉದಾಹರಣೆಗಳು ನಮ್ಮ ಮುಂದಿವೆ. ಸ್ವಲ್ಪ ತಿರುವು-ಮುರುವು ಮಾಡಿ ಅದೇ ಕತೆಯನ್ನು ಹೇಳಿದರೆ ಯಾರೂ ನಮ್ಮ ಕಡೆ ನೋಡೋದಿಲ್ಲ. ಅದಕ್ಕೆ ಸರಿಯಾಗಿ ಪರಭಾಷಾ ಚಿತ್ರಗಳ ಹಾವಳಿ. ಮೇಲಾಗಿ ಒಂದೆ ವಾರದಲ್ಲಿ 3-4 ಕನ್ನಡ ಚಿತ್ರಗಳು ಬಿಡುಗಡೆಯಾದರೆ ಯಾವುದನ್ನು ನೋಡಲು ಸಾಧ್ಯ? ಈ ಪರಿ ಪೈಪೋಟಿ ಯಾಕೆ?? ಪರಭಾಷೆಗಲ್ಲಿ ಈ ಪೈಪೋಟಿ  ಇಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ’ಮಗಧೀರ’ ಆ ಚಿತ್ರ ಬಿಡುಗಡೆಯ ಮುಂಚಿನ ವಾರ ಯಾವೂಂದು ತೆಲುಗು ಸಿನಿಮಾ ಬಿಡುಗಡೆಯಾಗಲಿಲ್ಲ.ಬಿಡುಗಡೆಯಾಗಿ ಮತ್ತೆರಡು ವಾರ ಮತ್ತೊಂದು ಚಿತ್ರ ಬಿಡುಗಡೆಯಾಗಲಿಲ್ಲ. ಅದರ ಬಿಸಿ ’ರಾಜ್’ ಚಿತ್ರಕ್ಕೂ ತಟ್ಟಿತು. ಕೇವಲ ಟ್ರೈಲರ್ ಇಂದ ಪ್ರೇಕ್ಷಕನನ್ನು ಥಿಯೇಟರ್ ಗೆ ಎಳೆದ ಚಿತ್ರ ’ಮಗಧೀರ’. ಆ ಮಾತ್ರದ ಹೊಂದಾಣಿಕೆ ಇಲ್ಲವೆಂದರೆ ಚಿತ್ರರಂಗದ ಉದ್ಧಾರ ಸಾಧ್ಯನಾ?? ಚಿತ್ರದ ಕತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಿ. ಅದನ್ನ ಬಿಟ್ಟು ಅರ್ಥವಿಲ್ಲದ ನಿರ್ಧಾರಗಳನ್ನು ಫರ್ಮಾನು ಹೊರಡಿಸಬೇಡಿ.
ಕನ್ನಡ ಚಿತ್ರ ಸಂಗೀತದಲ್ಲೂ ಅದೇ ಚಾಳಿ. ಅದೇ ಹಳೆಯ ರಾಗಗಳನ್ನು ಅದೇ ಗಾಯಕರಿಂದ ಹಾಡಿಸೋ ಪರಿಪಾಠವೇಕೆ? ಜಯಂತ ಕಾಯ್ಕಣಿ- ಸೋನು ನಿಗಮ್- ಮನೋ ಮೂರ್ತಿ ಅದ್ಭುತ ಕಾಂಬಿನೇಷನ್ನು. ಆದರೆ, ಮನೋ ಮೂರ್ತಿಗೂ, ಸೋನು ನಿಗಮ್ ಗೆ ಹೂಸದೇನನ್ನೂ ನೀಡಲು ಸಾಧ್ಯವಾಗಿಲ್ಲ. ಅದೇ ಅನಿಸುತಿದೆ........ ಇದ್ದುದರಲ್ಲಿ ಜಯಂತ ಕಾಯ್ಕಿಣಿಯ ಸಾಹಿತ್ಯ ಹೂಸತನದಿಂದ ಕೂಡಿದೆ. ದೇಶಿ ಗಾಯಕರಿಲ್ಲವೇ? ತಪ್ಪು ತಪ್ಪು ಉಚ್ಚಾರಣೆ ಮಾಡೋ ಸೋನು ಯಾಕೆ??

ಎಲ್ಲಾ ಉದ್ಯಮದಲ್ಲಿ ಇದ್ದ ಹಾಗೆ ಇಲ್ಲೂ ಕೂಡ ಅನುಭವ ಅತಿ ಮುಖ್ಯ. ಆದರೆ, ಬಹುತೇಕ ಮಂದಿಗೆ ಇದೊಂದು ಹವ್ಯಾಸ. ಚಿತ್ರ ನಿರ್ಮಾಣದ ಅ. ಆ. ಇ. ಈ ಗೊತ್ತಿಲ್ಲದ ಮಂದಿ ಚಿತ್ರ ನಿರ್ಮಣಕ್ಕೆ ಇಳಿದರೆ ಅವರಿಂದ ಎಂತಹ ಚಿತ್ರ ನಿರೀಕ್ಷಿಸಲು ಸಾಧ್ಯ? ಚಿತ್ರರಂಗವನ್ನು ಕಾಡುತ್ತಿರುವ ಮತ್ತೂಂದು ಪಿಡುಗು ರಿಮೇಕ್. ಯಾವುದೋ ಭಾಷೆಯಲ್ಲಿ ಚೆನ್ನಾಗಿ ಹೆಸರು-ದುಡ್ಡು ಮಾಡಿರುವ ಚಿತ್ರವನ್ನು ಕನ್ನಡೀಕರಿಸಿ ಅದನ್ನು ಪ್ರೇಕ್ಷಕರ ಮುಂದೆ ಇಡುವ ಪರಿಪಾಠ ಎಷ್ಟರ ಮಟ್ಟಿಗೆ ಸರಿ? ಆ ಚಿತ್ರ ಬೇರೂಂದು ನಾಡಿನಲ್ಲಿ ಯಶಸ್ವಿಯಾಗಲು ಕಥೆಯ ಜೊತೆಗೆ ತಾಂತ್ರಿಕ ವರ್ಗ, ಕಲಾವಿದರು ಕಾರಣ. ಕರ್ನಾಟಕದಲ್ಲಿ ಆ ಮಟ್ಟಿಗಿನ ಆರಾಧನೆ ಇಲ್ಲ. ದಿ| ಡಾ. ರಾಜ್ ಕುಮಾರ್ ಹೊರತಾಗಿ ಬೇರೆ ಯಾರನ್ನು ಜನ ಆ ಪರಿ ಆರಾಧಿಸಲಿಲ್ಲ. ಹಾಗಿರಬೇಕಾದರೆ ರಿಮೇಕ್ ಯಾಕೆ? ಕನ್ನಡದಲ್ಲಿ ಕತೆಗಳಿಲ್ವಾ? ಕತೆಗಳ ಬಗ್ಗೆ ಚಿತ್ರರಂಗದ ಹಿರಿಯರೂಬ್ಬರು ಸಿನಿಮಾಗೆ ಕತೆ ಬರಯಲು ಇಲ್ಲಿ ಯಾರಿಗೂ ಗೊತ್ತಿಲ್ಲ ಎಂದು ಉದ್ಗರಿಸಿದ್ದರು. ಆದರೆ,  ಎಷ್ಟು ಕಾದಂಬರಿ ಆಧಾರಿತ ಚಿತ್ರಗಳು ಬಂದಿಲ್ಲ?? ಇತ್ತೀಚಿಗೆ ಬಾಲಿವುಡ್ ಪ್ರಸ್ತುತ ವಿದ್ಯಾಮಾನಗಳನ್ನು ಆಧಾರಿಸಿ ಚಿತ್ರ ಮಾಡಲಾರಂಭಿಸಿದ್ದಾರೆ. ಆ ಪ್ರಯತ್ನ ನಾವೇಕೆ ಮಾಡಬಾರದು? ಇನ್ನಾದರೂ ಚಿತ್ರರಂಗ ವೃಥಾ ಆರ‍ೋಪ-ಪ್ರತ್ಯಾರೋಪಗಳನ್ನು ಬಿಟ್ಟು ಅದ್ಭುತ ಚಿತ್ರಕತೆಗಳನ್ನು ಸಿದ್ಧಪಡಿಸಿ ತೆರೆಗೆ ಅರ್ಪಿಸಿದರೆ ಪ್ರೇಕ್ಷಕ ಅದನ್ನು ಸ್ವಾಗತಿಸುತ್ತಾನೆ. ಚಿತ್ರರಂಗ ಉಳಿಯುತ್ತೆ.