Friday, December 04, 2009

Kannada Film Industry:: Crisis

ಕನ್ನಡ ಚಿತ್ರರಂಗ: ಅವಸಾನದ ಹಾದಿಯಲ್ಲಿ

ಇತ್ತೀಚಿಗೆ ಕನ್ನಡ ಚಿತ್ರರಂಗದ ’ಗಣ್ಯರು’ ಸಭೆ ಸೇರಿ ಕ್ರಿಯಾಸಮಿತಿ ರಚಿಸಿ ಚಿತ್ರದ ಗುಣಮಟ್ಟ ಹೆಚ್ಚಿಸಲು ಮತ್ತು ಚಿತ್ರರಂಗವನ್ನು ’ಮೇಲೆತ್ತಲು’ ಅನೇಕಾನೇಕ ನಿರ್ಧಾರಗಳನ್ನು ಪ್ರಕಟಿಸಿದೆ.

ಒಂದು ಚಿತ್ರ ಕೇವಲ 45 ದಿನಗಳಲ್ಲಿ ಶೂಟಿಂಗ್ ಮುಗಿಸಬೇಕೆಂಬ ನಿರ್ಧಾರವಿದೆಯಲ್ಲಾ? ಅದನ್ನು ಕ್ರಿಯಾಸಮಿತಿ ನಿರ್ಧರಿಸಲು ಸಾಧ್ಯವೇ? ಒಂದು ಚಿತ್ರದ ಶೂಟಿಂಗ್, ಪೋಸ್ಟ್-ಪ್ರೊಡಕ್ಷನ್ ಕೆಲಸಕ್ಕೆ ಇತಿ-ಮಿತಿ ಇಲ್ಲ. ಇರಕೂಡದು. ಅದನ್ನು ನಿರ್ಧಾರಿಸುವುದು ಚಿತ್ರಕತೆ ಮತ್ತು ನಿರ್ದೇಶಕ ಮಾತ್ರ. ಈ ರೀತಿಯ ಒತ್ತಡ ಹೇರುವ ಮೂಲಕ ಆತನ ಕ್ರಿಯಾಶೀಲತೆಗೆ ಕಡಿವಾಣ ಹಾಕಿದಂತೆ. ಎಲ್ಲೊ ದಿನೇಶ್ ಬಾಬು ತರದವರು 10-12 ದಿನಗಳಲ್ಲಿ ಚಿತ್ರ ಮುಗಿಸುತ್ತಾರೆ. ಅದು ಎಲ್ಲರಿಗೂ ಅನ್ವಯಿಸುವುದಿಲ್ಲ. ಹಾಗೆ ನೋಡಿದರೆ ದೃಶ್ಯ ಮಾಧ್ಯಮ ಕೇವಲ ನಿರ್ದೇಶಕರ ಮಾಧ್ಯಮ. ಆತನ ಮೇಲೆ ಈ ಪರಿ ನಿರ್ಬಂಧ ಹೇರೋದು ಯಾವ ನ್ಯಾಯ?

ಚಿತ್ರ ನಿರ್ಮಾಣಕ್ಕೆ ನಿರ್ದೇಶಕ ಎಷ್ಟು  ಮುಖ್ಯಾನೋ ಅಷ್ಟೇ ಮುಖ್ಯ ನಿರ್ಮಾಪಕ. ಯಾವುದೋ ಹುಚ್ಚು ಆವೇಶದಲ್ಲಿ ಅತಿಯಾದ ದುರಾಸೆಯಿಂದ ಚಿತ್ರ ನಿರ್ಮಾಣಕ್ಕೆ ಇಳಿಯುವ ನಿರ್ಮಾಪಕರು ಸರಿಯಾದ ನಿರ್ದೇಶಕರನ್ನು ಆಯ್ಕೆ ಮಾಡುವಲ್ಲಿ ವಿಫಲರಾಗಿದ್ದಾರೆ. ಆ ವೈಫಲ್ಯವನ್ನು ನಿರ್ದೇಶಕರ ಮೇಲೆ ಗೂಬೆ ಕೂರಿಸುವ ಮೂಲಕ ಸಮಾಧಾನ ಪಟ್ಟಿದ್ದಾರೆ.

2009 ಇಸವಿಯಲ್ಲಿ ಬಿಡುಗಡೆಯಾದ ಚಿತ್ರಗಳು 109. ಅದರಲ್ಲಿ ಯಶಸ್ವಿ ಅನಿಸಿಕೂಂಡದ್ದು ಬೆರಳೆಣಿಕೆಯಷ್ಟು ಮಾತ್ರ.ಈ ಸಂದರ್ಭದಲ್ಲಿ ಗುಣಮಟ್ಟ ಕುಸಿದಿದೆ ಅನ್ನುವುದು ವಿಧಿತ. ಅದಕ್ಕೆ ಕಾರಣ ಹುಡುಕಿದರೆ ಸಿಗುವ ಉತ್ತರ ನಿರ್ಮಾಪಕನ ದುರಸೆ ಮತ್ತು ನಿರ್ದೇಶಕನ ವೈಫಲ್ಯ. ಹಾಗಾದರೆ, ನಿರ್ದೇಶಕನಿಗೆ ಅನುಭವ ಇರಲೇಬೇಕು ಮತ್ತು ಆತ ಕನಿಷ್ಠ ೫ ಚಿತ್ರಗಳಿಗಾದರೂ ಸಹಾಯಕನಾಗಿ ದುಡಿದಿರಬೇಕು ಅನ್ನೋ ವಾದಕ್ಕೆ ಪುಷ್ಠಿ ದೂರೆಯುತ್ತದಾ? ಖಂಡಿತ ಇಲ್ಲ. ಅಪ್ಪಟ ಕ್ರಿಯಾಶೀಲ ಮಾಧ್ಯಮವಾದ ದೃಶ್ಯ ಮಾಧ್ಯಮವನ್ನು ಹೇಗೆ ಬಳಸಬೇಕು, ತನ್ನ ನಿಲುವನ್ನು ಹೇಗೆ ಪ್ರೆಸೆಂಟ್ ಮಾಡಬೇಕು ಗೊತ್ತಿಲ್ಲದ ನಿರ್ದೇಶಕರು ಚಿತ್ರವನ್ನು ಕೆಡಿಸುತ್ತಾರೆ. ಈ ವರ್ಷದಲ್ಲಿ ಬಿಡುಗಡೆಯಾದ ಚಿತ್ರಗಳು ತಾಂತ್ರಿಕವಾಗಿ ಉತ್ತಮವಾಗಿ ಮೂಡಿ ಬಂದಿದೆ. ಅದ್ಭುತವೆನಿಸುವಂತಹ ಸಂಗೀತವಿದೆ, ಸಾಹಿತ್ಯವಿದೆ. ಛಾಯಾಗ್ರಹಣವಿದೆ. ಆದರೆ ಅದನ್ನೆಲ್ಲಾ ಬಳಸುವಲ್ಲಿನಿರ್ದೇಶಕ ಎಡವಿದ್ದಾನೆ. ಚಿತ್ರ ಮಕಾಡೆ ಮಲಗಿದೆ. ಪ್ರೇಕ್ಷಕ ಥಿಯೇಟರ್ ಕಡೆ ತಲೆ ಹಾಕಿ ಮಲಗೋದಿಲ್ಲ.

ಈ ಸಾಲಿನಲ್ಲಿ ಬಿಡುಗಡೆಯಾದ ಯಾವೂಂದು ಚಿತ್ರವೂ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗಿಲ್ಲ. ದೊಡ್ಡ-ದೊಡ್ಡ ಬ್ಯಾನರ್ ಗಳ ಚಿತ್ರಗಳು ಪ್ರೇಕ್ಷಕನ ನಿರೀಕ್ಷೆಯನ್ನು ಹುಸಿ ಮಾಡಿವೆ. ಅದಕ್ಕೆ ಕಾರಣ ಗುಣಮಟ್ಟ. ಜನರಿಗೆ ಇಷ್ಟವಾಗುವಂತಹ ಮೌಲ್ಯಧಾರಿತ ಚಿತ್ರಗಳೆಲ್ಲಿ ಬಂದಿವೆ? ಅದೇ ಹಳೆಯ ಸಿದ್ಧ ಸೂತ್ರಗಳನ್ನಿಟ್ಟುಕೂಂಡು ಚಿತ್ರ ಮಾಡಿದರೆ ಯಾವ ಪ್ರೇಕ್ಷಕ ಬರುತ್ತಾನೆ?? ಅವನ ತಾಳ್ಮೆಗೂ ಒಂದು ಮಿತಿ ಇದೆ. ಒಂದೇ ಕತೆ ಇರುವ ಎಷ್ಟು ಚಿತ್ರಗಳನ್ನು ನೋಡಬಲ್ಲ?? ಅಂಬಾರಿ- ಅಮೃತಧಾರೆ; ವೀರ ಮದಕರಿ- ಕಿರಣ್ ಬೇಡಿ , ಹೀಗೆ ತುಂಬಾ ಉದಾಹರಣೆಗಳು ನಮ್ಮ ಮುಂದಿವೆ. ಸ್ವಲ್ಪ ತಿರುವು-ಮುರುವು ಮಾಡಿ ಅದೇ ಕತೆಯನ್ನು ಹೇಳಿದರೆ ಯಾರೂ ನಮ್ಮ ಕಡೆ ನೋಡೋದಿಲ್ಲ. ಅದಕ್ಕೆ ಸರಿಯಾಗಿ ಪರಭಾಷಾ ಚಿತ್ರಗಳ ಹಾವಳಿ. ಮೇಲಾಗಿ ಒಂದೆ ವಾರದಲ್ಲಿ 3-4 ಕನ್ನಡ ಚಿತ್ರಗಳು ಬಿಡುಗಡೆಯಾದರೆ ಯಾವುದನ್ನು ನೋಡಲು ಸಾಧ್ಯ? ಈ ಪರಿ ಪೈಪೋಟಿ ಯಾಕೆ?? ಪರಭಾಷೆಗಲ್ಲಿ ಈ ಪೈಪೋಟಿ  ಇಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ ’ಮಗಧೀರ’ ಆ ಚಿತ್ರ ಬಿಡುಗಡೆಯ ಮುಂಚಿನ ವಾರ ಯಾವೂಂದು ತೆಲುಗು ಸಿನಿಮಾ ಬಿಡುಗಡೆಯಾಗಲಿಲ್ಲ.ಬಿಡುಗಡೆಯಾಗಿ ಮತ್ತೆರಡು ವಾರ ಮತ್ತೊಂದು ಚಿತ್ರ ಬಿಡುಗಡೆಯಾಗಲಿಲ್ಲ. ಅದರ ಬಿಸಿ ’ರಾಜ್’ ಚಿತ್ರಕ್ಕೂ ತಟ್ಟಿತು. ಕೇವಲ ಟ್ರೈಲರ್ ಇಂದ ಪ್ರೇಕ್ಷಕನನ್ನು ಥಿಯೇಟರ್ ಗೆ ಎಳೆದ ಚಿತ್ರ ’ಮಗಧೀರ’. ಆ ಮಾತ್ರದ ಹೊಂದಾಣಿಕೆ ಇಲ್ಲವೆಂದರೆ ಚಿತ್ರರಂಗದ ಉದ್ಧಾರ ಸಾಧ್ಯನಾ?? ಚಿತ್ರದ ಕತೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಿ. ಅದನ್ನ ಬಿಟ್ಟು ಅರ್ಥವಿಲ್ಲದ ನಿರ್ಧಾರಗಳನ್ನು ಫರ್ಮಾನು ಹೊರಡಿಸಬೇಡಿ.
ಕನ್ನಡ ಚಿತ್ರ ಸಂಗೀತದಲ್ಲೂ ಅದೇ ಚಾಳಿ. ಅದೇ ಹಳೆಯ ರಾಗಗಳನ್ನು ಅದೇ ಗಾಯಕರಿಂದ ಹಾಡಿಸೋ ಪರಿಪಾಠವೇಕೆ? ಜಯಂತ ಕಾಯ್ಕಣಿ- ಸೋನು ನಿಗಮ್- ಮನೋ ಮೂರ್ತಿ ಅದ್ಭುತ ಕಾಂಬಿನೇಷನ್ನು. ಆದರೆ, ಮನೋ ಮೂರ್ತಿಗೂ, ಸೋನು ನಿಗಮ್ ಗೆ ಹೂಸದೇನನ್ನೂ ನೀಡಲು ಸಾಧ್ಯವಾಗಿಲ್ಲ. ಅದೇ ಅನಿಸುತಿದೆ........ ಇದ್ದುದರಲ್ಲಿ ಜಯಂತ ಕಾಯ್ಕಿಣಿಯ ಸಾಹಿತ್ಯ ಹೂಸತನದಿಂದ ಕೂಡಿದೆ. ದೇಶಿ ಗಾಯಕರಿಲ್ಲವೇ? ತಪ್ಪು ತಪ್ಪು ಉಚ್ಚಾರಣೆ ಮಾಡೋ ಸೋನು ಯಾಕೆ??

ಎಲ್ಲಾ ಉದ್ಯಮದಲ್ಲಿ ಇದ್ದ ಹಾಗೆ ಇಲ್ಲೂ ಕೂಡ ಅನುಭವ ಅತಿ ಮುಖ್ಯ. ಆದರೆ, ಬಹುತೇಕ ಮಂದಿಗೆ ಇದೊಂದು ಹವ್ಯಾಸ. ಚಿತ್ರ ನಿರ್ಮಾಣದ ಅ. ಆ. ಇ. ಈ ಗೊತ್ತಿಲ್ಲದ ಮಂದಿ ಚಿತ್ರ ನಿರ್ಮಣಕ್ಕೆ ಇಳಿದರೆ ಅವರಿಂದ ಎಂತಹ ಚಿತ್ರ ನಿರೀಕ್ಷಿಸಲು ಸಾಧ್ಯ? ಚಿತ್ರರಂಗವನ್ನು ಕಾಡುತ್ತಿರುವ ಮತ್ತೂಂದು ಪಿಡುಗು ರಿಮೇಕ್. ಯಾವುದೋ ಭಾಷೆಯಲ್ಲಿ ಚೆನ್ನಾಗಿ ಹೆಸರು-ದುಡ್ಡು ಮಾಡಿರುವ ಚಿತ್ರವನ್ನು ಕನ್ನಡೀಕರಿಸಿ ಅದನ್ನು ಪ್ರೇಕ್ಷಕರ ಮುಂದೆ ಇಡುವ ಪರಿಪಾಠ ಎಷ್ಟರ ಮಟ್ಟಿಗೆ ಸರಿ? ಆ ಚಿತ್ರ ಬೇರೂಂದು ನಾಡಿನಲ್ಲಿ ಯಶಸ್ವಿಯಾಗಲು ಕಥೆಯ ಜೊತೆಗೆ ತಾಂತ್ರಿಕ ವರ್ಗ, ಕಲಾವಿದರು ಕಾರಣ. ಕರ್ನಾಟಕದಲ್ಲಿ ಆ ಮಟ್ಟಿಗಿನ ಆರಾಧನೆ ಇಲ್ಲ. ದಿ| ಡಾ. ರಾಜ್ ಕುಮಾರ್ ಹೊರತಾಗಿ ಬೇರೆ ಯಾರನ್ನು ಜನ ಆ ಪರಿ ಆರಾಧಿಸಲಿಲ್ಲ. ಹಾಗಿರಬೇಕಾದರೆ ರಿಮೇಕ್ ಯಾಕೆ? ಕನ್ನಡದಲ್ಲಿ ಕತೆಗಳಿಲ್ವಾ? ಕತೆಗಳ ಬಗ್ಗೆ ಚಿತ್ರರಂಗದ ಹಿರಿಯರೂಬ್ಬರು ಸಿನಿಮಾಗೆ ಕತೆ ಬರಯಲು ಇಲ್ಲಿ ಯಾರಿಗೂ ಗೊತ್ತಿಲ್ಲ ಎಂದು ಉದ್ಗರಿಸಿದ್ದರು. ಆದರೆ,  ಎಷ್ಟು ಕಾದಂಬರಿ ಆಧಾರಿತ ಚಿತ್ರಗಳು ಬಂದಿಲ್ಲ?? ಇತ್ತೀಚಿಗೆ ಬಾಲಿವುಡ್ ಪ್ರಸ್ತುತ ವಿದ್ಯಾಮಾನಗಳನ್ನು ಆಧಾರಿಸಿ ಚಿತ್ರ ಮಾಡಲಾರಂಭಿಸಿದ್ದಾರೆ. ಆ ಪ್ರಯತ್ನ ನಾವೇಕೆ ಮಾಡಬಾರದು? ಇನ್ನಾದರೂ ಚಿತ್ರರಂಗ ವೃಥಾ ಆರ‍ೋಪ-ಪ್ರತ್ಯಾರೋಪಗಳನ್ನು ಬಿಟ್ಟು ಅದ್ಭುತ ಚಿತ್ರಕತೆಗಳನ್ನು ಸಿದ್ಧಪಡಿಸಿ ತೆರೆಗೆ ಅರ್ಪಿಸಿದರೆ ಪ್ರೇಕ್ಷಕ ಅದನ್ನು ಸ್ವಾಗತಿಸುತ್ತಾನೆ. ಚಿತ್ರರಂಗ ಉಳಿಯುತ್ತೆ.   

No comments:

Post a Comment