Thursday, December 31, 2009

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

ಲೇ:ಅನು
ಸಂ:ಅಭಿ

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

“ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ…….” ಪ್ರೇಮದ ಅನುಭವ ಇಲ್ಲದವರಿಗೂ ಈ ಅದ್ಭುತ ಲೋಕದ ಪ್ರಯಾಣ ಮಾಡಿಸುವ ಹಾಡು; ಆ ಪ್ರೇಮ ಸಮುದ್ರದ ದರ್ಶನ ಮಾಡಿಸುವ ಆ ದನಿ ನೀಲಾಕಾಶ ಮೀರಿ ಅನುರಣಿಸುತ್ತಲೇ ಇರುತ್ತದೆ. “ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ……” ದೇವ ಮಂದಿರದಂತೆ ಪ್ರೀತಿಯಿಂದ ಪುನೀತವಾಗಿದೆ ಮನಸಿನೊಳಗೂ. ಎಷ್ಟು ಸಹಜ ದನಿಯಲ್ಲಿ ಹೇಳಿ ಬಿಡುತ್ತಾರೆ.


ದೂರದ ಊರಿನಲ್ಲೇ ಉಳಿದ ಪತಿಯ ನೆನಪಿನಲ್ಲಿ, ತವರ ಸಂಭ್ರಮದಲ್ಲಿ ಇದ್ದೂ ಇರಲಾರದ ತುಮುಲದ ಚಿತ್ರ “ಬಳೆಗಾರ ಚೆನ್ನಯ್ಯ” ನದು. ಮಾಂತ್ರಿಕ ಧ್ವನಿಯಲ್ಲಿ “ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು” ಎಂದು ಘಟ್ಟಿಸಿ ಕೇಳಿದಾಗ ಯಾವ ಪತಿರಾಯನಿಗೂ ಕೋಪ ಅಳಿದು ಹೋಗಬೇಕು.


ಏನೆಲ್ಲಾ ಕಷ್ಟ-ಕೋಟಲೆ ಇದ್ದರೂನೂ ಸೂರ್ಯ ಹುಟ್ಟಿ ಬರುವ ಭರವಸೆ ನಮಗಿತ್ತು. “ಕೋಡಗನ ಕೋಳಿ ನುಂಗಿತ್ತಾ….” “ತರವಲ್ಲ ತಗಿ ನಿನ್ನ ತಂಬೂರಿ…” “ಸೋರುತಿಹುದು ಮನೆಯ ಮಾಳಿಗೆ…” ಎನ್ನುತ್ತಾ ತತ್ವಗಳನ್ನು ಕೇಳಿಸುತ್ತಿದ್ದ ಅಮೋಘ ಧ್ವನಿ ನಿತ್ಯ ನೂತನ- ನಿತ್ಯ ನಿರಂತರ ಎಂದು ನೆಮ್ಮದಿಯಲ್ಲೇ ಇದ್ದು ಬಿಟ್ಟವಲ್ಲ? ಆ ಧ್ವನಿ ಮುಂದೊಮ್ಮೆ ನೀರವವಾಗಬಹುದೆಂಬ ಯೋಚನೆಯೂ ಇಲ್ಲದಂತೆ.


“ಬಾ ಇಲ್ಲಿ ಸಂಭವಿಸು!” ಎಂತಹ ಹಾಡು!! ಎಂತಹ ಬೇಡಿಕೆ….. ಸಿ. ಅಶ್ವತ್ಥ್ ಮತ್ತೆ ಮತ್ತೆ ಇಲ್ಲಿ ಆವಿರ್ಭಾವಿಸಬೇಕು. ತುಂಬು ಜೀವನ ನಡೆಸಿದ ಆ ಚೇತನದ ಸ್ವರ ಗಂಗೆ ನಮ್ಮ ಮನ-ಮನೆಗಳನ್ನು ಆರ್ದ್ರವಾಗಿಸಬೇಕು.


No comments:

Post a Comment