Wednesday, December 09, 2009

Guna Mukhi

ಗುಣಮುಖಿ


ಈ ಹೊತ್ತಿಗೆಯ ಹೆಸರೇ ಮಾರ್ಮಿಕವಾಗಿದೆ. ಗುಣಮುಖಿ ಎಂದಾಕ್ಷಣ ನಮಗೆ ರೋಗಿಗಳ ನೆನಪಾಗುತ್ತದೆ. ಅವರು ಗುಣಮುಖರಾಗಲಿ ಎಂದೇ ಆಶಿಸುತ್ತೇವೆ. ಅದು ಸಹಜವೂ ಹೌದು. ಹಾಗೆಯೇ, ನಾವೆಲ್ಲಾ ಮಾನಸಿಕವಾಗಿ ಆರೋಗ್ಯವಂತರ? ಎಂದು ನಮ್ಮನ್ನೇ ಕೇಳಿಕೂಳ್ಳುವಂತಾಗಿದೆ. ಇವತ್ತಿನ ಈ ಸಂಕೀರ್ಣ ಬದುಕಿನಲ್ಲಿ ಜೀವನ ಮೌಲ್ಯಗಳು ಮತ್ತು ಅದರ ಅಳವಡಿಕೆ ಹುಡುಕಿದರೂ ಕಾಣ ಸಿಗದು.

ಇದೊಂದು ಕಥಾ ಗುಚ್ಛ. ಇಲ್ಲಿರುವ ಕಥೆಗಳಲ್ಲಿ ಜೀವನ ಪ್ರೀತಿ ಇದೆ. ಮೌಲ್ಯಗಳಿವೆ. ಹಾಗೆಯೇ, ಜೀವನ ಪಾಠವೂ ಇದೆ. ಕತ್ತಲಿಂದ ಬೆಳಕಿನೆಡೆಗೆ ದಾರಿ ದೀಪವಿದೆ. ಯೋಜಕರ ಮಾತಿನಲ್ಲೇ ಹೇಳುವುದಾದರೆ,

“ಕ್ಯಾನ್ಸರ್ ಮೊದಲಾದ ಮರಣಾಂತಿಕ ರೋಗಗಳಿಗೆ ತುತ್ತಾಗಿ ಸಾವಿನ ದಿನಗಳನ್ನುದುಃಖದಿಂದ ದೂಡುತ್ತಿರುವವರ ಹಾಗೂ ಸಣ್ಣ-ಸಣ್ಣ ತೊಂದರೆಗಳಿಗೂ ಹೆದರಿ ಇನ್ನು ಬದುಕೆಲ್ಲ ಕತ್ತಲಾಯಿತು ಎಂದು ಹತಾಶೆಗೊಂಡವರ ಆತ್ಮವಿಶ್ವಾಸವನ್ನು ತುಂಬುವ ಮತ್ತು ಸಾಂತ್ವಾನದ ಮಾತುಗಳಿಂದ ನಗುವನ್ನು ಚಿಮ್ಮಿಸಿ ಅವರ ಬಾಳಿನಲ್ಲಿ ಬೆಳಕನ್ನು ಚೆಲ್ಲುವ ಕಥೆಗಳು ಇಲ್ಲಿವೆ. ಈ ಕಾರಣಕ್ಕಾಗಿ ’ಗುಣಮುಖಿ’ ಯನ್ನು ವಿಶೇಷವಾಗಿ ಕರ್ನಾಟಕದಲ್ಲಿರುವ ಸಾವಿರಾರು ಆಸ್ಪತ್ರೆಗಳಲ್ಲಿನ ಲಕ್ಷಾಂತರ ರೋಗಿಗಳಿಗೆ ಉಚಿತವಾಗಿ ಮುಟ್ಟಿಸಬೇಕೆಂಬ ಆಶಯ ನನ್ನದು”.

ಇವು ಕೇವಲ ರೋಗಿಗಳಿಗೆ ಮಾತ್ರವಲ್ಲದೇ ಸಣ್ಣ ಸೋಲಿಗೂ ಹೆದರಿ ಆತ್ಮಹತ್ಯೆಯಂತಹ ಅನಾಹುತ ಮಾಡಿಕೊಳ್ಳುವ ಯುವಜನಾಂಗಕ್ಕೆ ಒಂದು ದೀವಿಗೆ. ಈ ಕಥೆಗಳು ಚೈತನ್ಯದಾಯಕ. ಪ್ರತಿಯೊಬ್ಬರು ವಯಸ್ಸಿನ-ಜಾತಿಯ ಭೇದ ಮರೆತು ಓದಲೇಬೇಕಾದ ಕೃತಿ ಇದು.

ಹಾಗೆಯೇ, ಯೋಜಕರಿಗೆ ಇದನ್ನು ಉಚಿತವಾಗಿ ರೋಗಿಗಳಿಗೆ ತಲುಪಿಸುವ ಗುರಿ ಇದೆ. ಇದನ್ನು ಓದಿದ ಯಾವುದೇ ವೈದ್ಯಾಧಿಕಾರಿ, ವೈದ್ಯ, ಆಸ್ಪತ್ರೆ ಸಿಬ್ಬಂದಿ ಅವರನ್ನು ಭೇಟಿ ಮಾಡಿ ಈ ಪುಸ್ತಕ ಎಲ್ಲರಿಗೂ ತಲುಪುವಂತೆ ಮಾಡಲು ನನ್ನದೊಂದು ನಮ್ರ ವಿನಂತಿ.

ಈ ಕಿರು ಹೊತ್ತಿಗೆಯ ಒಂದು ಪ್ರಸಂಗ:

ಸಾಧು ಜೆ.ಪಿ. ವಾಸ್ವಾನಿ ಹೇಳಿದ ಕಥೆ ಇದು. ಪಿಶಾಚಿಯೊಂದು(ಸೈತಾನ) ತನ್ನ ನೌಕರಿಯನ್ನು ನಿಲ್ಲಿಸಲು ನಿರ್ಧರಿಸಿತು. ನಿವೃತ್ತಿ ಘೋಷಿಸುವ ಸಂದರ್ಭದಲ್ಲಿ ತಾನು ಧೀರ್ಘಕಾಲ ಉಪಯೋಗಿಸಿದ ಉಪಕರಣಗಳನ್ನು ಅಗ್ಗದ ಬೆಲೆಗೆ ಬಿಕರಿ ಮಾಡುವುದಾಗಿ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಿತು.

ಗಿರಾಕಿಗಳನ್ನು ಆಕರ್ಷಿಸುವ ಸಲುವಾಗಿ ಪಿಶಾಚಿಯ ಮನೆಯಂಗಳದಲ್ಲಿ ಉಪಕರಣಗಳನ್ನೆಲ್ಲ ಪ್ರದರ್ಶನಕ್ಕೆ ಇರಿಸಲಾಗಿತ್ತು. ಇಂದ್ರಿಯಾಸಕ್ತಿ, ಸ್ವಾರ್ಥ, ಮಿಥ್ಯಾ ಪ್ರತಿಷ್ಠೆ, ಜಂಭ, ಹೊಟ್ಟೆಕಿಚ್ಚು, ವೈರ, ಕೋಪ, ದುರಾಶೆ, ಜಿಪುಣತನ, ಅಧಿಕಾರದಾಹ, ಕೀರ್ತಿ, ಕಾಮನೆ ಮುಂತಾದವುಗಳು ಬಲುಬೇಗನೆ ಮಾರಾಟವಾದವು. ಏಕೆಂದರೆ ಇವುಗಳ ಬೆಲೆ ತುಂಬ ಅಗ್ಗವಾಗಿತ್ತು ಮತ್ತು ಗಿರಾಕಿಗಳು ಬಹಳ ಬೇಗ ಬಂದು ವ್ಯವಹಾರ ಕುದುರಿಸಿ ಕೊಂಡರು.

ಆದರೆ ಸ್ವಲ್ಪ ತಡವಾಗಿ ಬಂದವರಿಗೆ ಕಾಣಸಿಕ್ಕಿದ್ದು ಎರಡೇ ಉಪಕರಣಗಳು. ಇವುಗಳಿಗೆ ಅಂಟಿಸಿದ ಬೆಲೆಗಳ ಚೀಟಿಗಳನ್ನು ನೋಡಿದವರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಕ್ರಯ ಬಹಳ ದುಬಾರಿಯಾಗಿತ್ತು. ನಿರಾಶೆ ಮತ್ತು ಖಿನ್ನತೆಗಳೇ ಈ ಉಪಕರಣಗಳು.
ಗಿರಾಕಿಯೊಬ್ಬ ಪ್ರಶ್ನೆ ಮಾಡಿದ- “ಅದೇಕೆ ಈ ಉಪಕರಣಗಳಿಗೆ ಇಷ್ಟು ಬೆಲೆ? ಉಳಿದವನ್ನೆಲ್ಲ ಕೈಗೆಟಕುವ ಕ್ರಯಕ್ಕೆ ಮಾರಿದೆಯಲ್ಲ?”
“ಇವು ತುಂಬಾ ಶಕ್ತಿಶಾಲಿ ಉಪಕರಣಗಳು. ಉಳೀದೆಲ್ಲ ಸಲಕರಣೆಗಳು ಸೋತಾಗ ಮಾತ್ರ ನಾನು ಇವನ್ನು ಉಪಯೋಗಿಸುತ್ತಿದ್ದೆ. ಆದ್ದರಿಂದಲೇ ಇವು ಹೆಚ್ಚು ಸವೆದಿಲ್ಲ. ಮನುಷ್ಯನನ್ನು ನಿರಾಶೆಗೊಳಿಸಿದರೆ ಅವನು ಖಿನ್ನನಾಗುತ್ತಾನೆ. ಆಗ ಅವನು ಜೀವನದಲ್ಲಿ ಸೋಲುತ್ತಾನೆ” ಎಂದು ಪಿಶಾಚಿ ವಿವರಿಸಿತು.

ಖಿನ್ನತೆ ಮತ್ತು ಅದಕ್ಕೆ ಕಾರಣವಾದ ನಿರಾಶೆ ಎಂದಿಗೂ ಒಳ್ಳೆಯದಲ್ಲವೆಂದು ಈ ದೃಷ್ಠಾಂತ ಕಥೆಯು ಸಾರುತ್ತದೆ.

ಲೇಖಕರು: ಪ್ರೊ.ವಿ.ಬಿ.ಅರ್ತಿಕಜೆ
ಯೋಜನೆ: ಗೋವರ್ಧನ್ ಅಂಕೋಲೆಕರ್(93410-80609)

ಪ್ರಕಾಶಕರು: ವಿಶ್ವವ್ಯಾಪಿ ಗಣೇಶ ಪ್ರಕಾಶನ, ಸಾಗರ-577401

No comments:

Post a Comment