Tuesday, February 02, 2010

ಪುಟ್ಟಕ್ಕನ ಮೆಡಿಕಲ್ ಕಾಲೇಜು


ಈ ಕಥೆ ಸುಮಾರು ಎರಡು ದಶಕಗಳಷ್ಟು ಹಳೆಯದು. ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಲೇಖಕರೇ ಹೇಳುವಂತೆ ಕಥೆ 
ಕಾಲಾತೀತವಾಗಿರಬೇಕು. ಹಾಗಿದ್ದರೆ ಅವು ಚಿರಾಯು.

ಇವತ್ತಿನ ಸಮಾಜದ ನಿಜ ಸ್ವರೂಪ ಈ ಕಥೆಯಲ್ಲಿ ಚಿತ್ರಿತವಾಗಿದೆ. ಇಂದು ರೈತ ಅತಂತ್ರವಾಗಿದ್ದಾನೆ. ಆತ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ. ಕಷ್ಟ ಪಟ್ಟು ದುಡಿದು ಅದರ ಫಲ ತಿಂದುಂಡು ಸುಖವಾಗಿರುವ ಮನಃಸ್ಥಿತಿಯಲ್ಲಿ ಇವತ್ತು ರೈತನಿಲ್ಲ. ಆತನಿಗೆ ತನ್ನ ಜಮೀನು ಮಾರುವ ಉಮೇದು. ಸರಿಯಾದ ಬೆಲೆ ಸಿಗದೆ ಅದನ್ನು ಬಿಸಾಡುವ ಬದಲು ತನ್ನ ಜಮೀನನ್ನು ಮಾರಿ ಅದರಿಂದ ಬರುವ “ಖಚಿತ ಧನ”ಕ್ಕಾಗಿ ಆಸೆ ಪಡ್ತಾನೆ. ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆಯಂತೆ. ರೈತ ತನ್ನ ಬೆಳೆಗೆ ತಕ್ಕ ಬೆಲೆ ನಿಗದಿ ಪಡಿಸೋದಿಲ್ಲ. ಇದನ್ನು ಮಧ್ಯವರ್ತಿಗಳು ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.  ಇದೇ ಆಶಯವನ್ನಿಟ್ಟುಕೊಂಡು ಲೇಖಕರು ತಮ್ಮ ಚಿತ್ರ “ಮಾತಾಡ್ ಮಾತಾಡು ಮಲ್ಲಿಗೆ” ಯಲ್ಲಿ ತೆರೆಗೆ ತಂದಿದ್ದಾರೆ.

ಈ ಕಥೆಯಲ್ಲಿ ನಮ್ಮ ಕಥಾನಾಯಕಿ ಪುಟ್ಟಕ್ಕ ಅಸಾಹಯಕ ಹೆಣ್ಣು(ರೈತ). ಆಕೆಗೊಂದಿಷ್ಟು ಜಮೀನಿದೆ. ಅದೂ ಹೈವೆ ರಸ್ತೆಯ ಬಳಿ.ಇಲ್ಲಿ ಪುಟ್ಟಕ್ಕ ಶೋಷಿತ ಮಹಿಳೆಯರ ಪ್ರತಿನಿಧಿಯಂತೆ ಕಾಣುತ್ತಾಳೆ. ಅದೇ ಪಾತ್ರಕ್ಕೆ ಪುರುಷ ಆಯಾಮ ಹಚ್ಚಿ ……….ಮಲ್ಲಿಗೆಯಾಗಿಸಿದ್ದಾರೆ ಲೇಖಕರು.

ಆಕೆಯ ಜಮೀನನ್ನು ಕಬಳಿಸಿ ಅಲ್ಲೊಂದು ಮೆಡಿಕಲ್ ಕಾಲೇಜು ಕಟ್ಟುವ ಮಹತ್ವಾಕಾಂಕ್ಷಿ ಅಲ್ಲಿಯ ಸ್ವಾಮಿಗಳದು. ಸ್ವಾಮಿಗಳು-ಮಠಗಳು ದೇವರ-ಜಾತಿಯ ಹೆಸರಲ್ಲಿ ಮಾಡುತ್ತಿರುವ-ಮಾಡುವ ಅನ್ಯಾಯ ಅಕ್ರಮಗಳು ಕಾಲಾತೀತ. ತನ್ನ ಜಮೀನನ್ನು ಉಳಿಸಿಕೊಳ್ಳಲು ಪಡಬಾರದ ಪಾಡು ಪಡುವ ಅನಕ್ಷರಸ್ಥೆ ಪುಟ್ಟಕ್ಕ ಕೊನೆಗೂ ವಿಫಲಳಾಗುತ್ತಾಳೆ. ಅವಳ ಜಮೀನನ್ನು ಕಬ್ಜಾ ಮಾಡಿ ಅಲ್ಲೊಂದು “ಕಟ್ಟಡ” ನಿರ್ಮಿಸಿ ಅದಕ್ಕೆ “ಕಾಲೇಜು” ಎಂದು ನಾಮಕರಣ ಮಾಡುಲು ಘನ ಮುಖ್ಯಮಂತ್ರಿಗಳನ್ನು ನಮ್ಮ ಸ್ವಾಮೀಜಿ ಆಹ್ವಾನಿಸುತ್ತಾರೆ.

ಇವತ್ತಿನ ವಾಸ್ತವಕ್ಕೆ ಕನ್ನಡಿಯಾಗಿ ಈ ಕತೆ ನಿಲ್ಲುತ್ತದೆ. ಎಲ್ಲಾ ಕಾಲಕ್ಕೂ ಸಲ್ಲುವಂತ ಕಥೆಯಾಗಿ ಹೊರ ಹೊಮ್ಮುತ್ತದೆ.
ಈ ಕಥೆ “ಸನ್ನಿಧಿ” ಕಥಾ ಸಂಕಲನದ್ದು. ಅದು ಅಭಿವ್ಯಕ್ತಿಯ ಮೂಲಕ ಮತ್ತೊಮ್ಮೆ ಪ್ರಕಟವಾಗಿದೆ.

ಪ್ರಥಮ ಮುದ್ರಣ:1990
ಮತ್ತೆ ಪ್ರಕಾಶಿಸಿದ್ದು:2009
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ

No comments:

Post a Comment